ನ್ಯೂಸ್

ಕೇಂದ್ರ ಸಚಿವ ಜಾವಡೇಕರ್ ಜತೆಗೆ ಬುಧವಾರ ವೇದಿಕೆ ಹಂಚಿಕೊಂಡಿದ್ದ ಪಿಐಬಿ ಡಿಜಿಗೆ ಕೋವಿಡ್-19 ಸೋಂಕು ದೃಢ

ನವದೆಹಲಿ: ಪ್ರೆಸ್​ ಇನ್​ಫಾರ್ಮೇಷನ್ ಬ್ಯೂರೋ (ಪಿಐಬಿ) ಡೈರೆಕ್ಟರ್ ಜನರಲ್​ ಕೆ.ಎಸ್​.ಧಾಟಿವಾಲಾ ಅವರಿಗೆ ಕೋವಿಡ್​-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಅವರನ್ನು ಕೂಡಲೆ ಚಿಕಿತ್ಸೆಗಾಗಿ ದೆಹಲಿಯ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್​ ಸೈನ್ಸಸ್​ (ಏಮ್ಸ್​)ನ ಟ್ರಾಮಾ ಸೆಂಟರ್​ಗೆ ನಿನ್ನೆ ಸಂಜೆ ಏಳು ಗಂಟೆಗೆ ದಾಖಲಿಸಲಾಗಿದೆ. ಧಾಟಿವಾಲಾ ಅವರ ಆರೋಗ್ಯ ಪರಿಸ್ಥಿತಿ ಕುರಿತು ಏಮ್ಸ್​ನ ವೈದ್ಯಕೀಯ ಮೂಲಗಳು ಏನೂ ತಿಳಿಸಿಲ್ಲ.

ಧಾಟಿಯಾವಾಲಾ ಅವರು ಬುಧವಾರ ಕ್ಯಾಬಿನೆಟ್ ಸಭೆಯ ಬ್ರೀಫಿಂಗ್ ಸಮಯದಲ್ಲಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಕಾಶ್ ಜಾವಡೇಕರ್ ಅವರ ಜತೆಗೆ ವೇದಿಕೆ ಹಂಚಿಕೊಂಡಿದ್ದರು.ಈಗ ಅವರ ಆರೋಗ್ಯದ ವಿಚಾರವೂ ಎಲ್ಲರ ಗಮನ ಸೆಳೆದಿದೆ.

ಇವರ ಕಚೇರಿಗೆ ಸಮೀಪವೇ ನ್ಯಾಷನಲ್ ಮೀಡಿಯಾ ಸೆಂಟರ್ ಇದ್ದು, ಇದನ್ನು ಸೋಮವಾರ ಬಂದ್ ಮಾಡಿ ಇರಿಸಲಾಗುತ್ತದೆ. ಮಂಗಳವಾರವೂ ಈ ಸೆಂಟರ್ ತೆರೆಯವುದು ಖಚಿತವಿಲ್ಲ. ಇಡೀ ಕಟ್ಟಡವನ್ನು ಸ್ಯಾನಿಟೈಸ್ ಮಾಡಿದ ಬಳಿಕ ಉಪಯೋಗಕ್ಕೆ ಬಿಡಲಾಗುತ್ತದೆ. ಉಳಿದಂತೆ ಎಲ್ಲವೂ ಕೋವಿಡ್ 19 ನಿಯಮಾವಳಿ ಪ್ರಕಾರವೇ ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ಪ್ರೆಸ್​ ಇನ್​ಫಾರ್ಮೆಷನ್​ ಬ್ಯೂರೋಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನೂ ಶಾಸ್ತ್ರಿಭವನದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಪತ್ರಿಕಾಗೋಷ್ಠಿ ಕೂಡ ಶಾಸ್ತ್ರಿ ಭವನದಲ್ಲೇ ನಡೆಯಲಿದೆ. ನ್ಯಾಷನಲ್ ಮೀಡಿಯಾ ಸೆಂಟರ್ ಸ್ಯಾನಿಟೈಸ್ ಆಗಿ ಬಳಕೆಗೆ ಯೋಗ್ಯ ಎಂಬುದನ್ನು ಅಧಿಕೃತರು ಪ್ರಮಾಣೀಕರಿಸಿದ ಬಳಿಕವಷ್ಟೇ ಅಲ್ಲಿ ಎಂದಿನಂತೆ ಕಾರ್ಯಚಟುವಟಿಕೆಗಳು ನಡೆಯಲಿವೆ. (ಏಜೆನ್ಸೀಸ್)