ನ್ಯೂಸ್

ಪರೀಕ್ಷಾಹಬ್ಬ ಸಂಭ್ರಮಿಸಿ... ದಿಗ್ವಿಜಯ-ವಿಜಯವಾಣಿ ಫೋನ್ ಇನ್​

Webdesk - Ravikanth
ಗಣಿತ ತಲೆಗೆ ಹೋಗಲ್ಲ ಸಾರ್, ಏನು ಮಾಡಬೇಕು? ಕೆಮಿಸ್ಟ್ರಿಯಲ್ಲಿ ಹೆಚ್ಚು ಸ್ಕೋರ್ ಮಾಡುವುದು ಹೇಗೆ? ಮಾದರಿ ಪ್ರಶ್ನೆಪತ್ರಿಕೆ ಮಾದರಿಯಲ್ಲೇ ಪ್ರಶ್ನೆಪತ್ರಿಕೆ ಇರುತ್ತದಾ ಸಾರ್?- ವಿಜಯವಾಣಿ ಹಾಗೂ ದಿಗ್ವಿಜಯ ಚಾನಲ್ ಮಂಗಳವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಕರೆಮಾಡಿದ ವಿದ್ಯಾರ್ಥಿಗಳು ಇಂಥ ಅನೇಕ ಸಂದೇಹ, ಗೊಂದಲಗಳಿಗೆ ಪರಿಹಾರ ಪಡೆದುಕೊಂಡರು. ಪದವಿಪೂರ್ವ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಂ. ಗಣಾಚಾರಿ ಹಾಗೂ ವಿಷಯ ತಜ್ಞರು ವಿದ್ಯಾರ್ಥಿಗಳಿಗೆ ಯಶಸ್ಸಿನ ಟಿಪ್ಸ್ ನೀಡಿದರು.

ಕಳೆದ ವರ್ಷ ಕರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಮಾಡಿ ಎಲ್ಲರನ್ನೂ ಪಾಸ್ ಮಾಡಲಾಗಿದೆ. ಅಲ್ಲದೆ, ಈ ವರ್ಷ ಕರೊನಾದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಧಿ ಕಡಿಮೆ ಸಿಕ್ಕಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಪಾಸ್ ಆಗುವಂತೆ ಪ್ರಶ್ನೆಪತ್ರಿಕೆಯನ್ನು ರೂಪಿಸಲಾಗಿದೆ. ಆಯ್ಕೆ ಮಾದರಿಯ ಪ್ರಶ್ನೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಭಯವಿಲ್ಲದೆ ಪರೀಕ್ಷೆ ಬರೆಯಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಂ. ಗಣಾಚಾರಿ ಧೈರ್ಯ ತುಂಬಿದರು. ವಿದ್ಯಾರ್ಥಿಗಳು ತಮಗೆ ಸುಲಭ ಎನಿಸಿದ ಪ್ರಶ್ನೆಗಳನ್ನು ಮೊದಲಿಗೆ ಆಯ್ಕೆ ಮಾಡಿಕೊಂಡು ಬರೆಯುವುದು ಉತ್ತಮ. ಒಂದು ಭಾಗದಲ್ಲಿ ತಿಳಿಸಿದ್ದಕ್ಕಿಂತ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿದರೂ, ಮೊದಲು ಬರೆದ ಪ್ರಶ್ನೆಗಳನ್ನು ಅಥವಾ ಹೆಚ್ಚಿನ ಅಂಕ ಗಳಿಸಿರುವ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನಕ್ಕೆ ಪರಿಗಣಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಬೇಡ. ನೀಡಿರುವ ಎಲ್ಲ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಬರೆಯುವುದಕ್ಕೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಆಯ್ಕೆ ಅವಕಾಶ ಹೆಚ್ಚಳ: ಪ್ರತಿವರ್ಷ 1 ಅಂಕದ ಪ್ರಶ್ನೆಗಳು ಕಡಿಮೆ ಇರುತ್ತಿದ್ದವು. ಇವುಗಳನ್ನು ಈ ಬಾರಿ 10 ಅಂಕಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ಮೊದಲು ಪ್ರಶ್ನೆಗಳಿಗೆ ಹೆಚ್ಚಿನ ಆಯ್ಕೆ ಸಂಖ್ಯೆಯನ್ನು ಕಡಿಮೆ ನೀಡಲಾಗುತ್ತಿತ್ತು. ಉದಾಹರಣೆಗೆ 1 ಅಂಕದ 10 ಪ್ರಶ್ನೆಗಳಿಗೆ ಕೇವಲ 10 ಪ್ರಶ್ನೆಗಳಿರುತ್ತಿದ್ದವು. ಈ ಬಾರಿ 15 ಪ್ರಶ್ನೆಗಳಿರುತ್ತವೆ. ಮೊದಲು ವಿಜ್ಞಾನ ವಿಷಯದಲ್ಲಿ ಒಂದು ಪ್ರಶ್ನೆಪತ್ರಿಕೆಯಲ್ಲಿ 105 ಪ್ರಶ್ನೆಗಳು ಇರುತ್ತಿದ್ದವು. ಈ ಬಾರಿಯಿಂದ 140 ಪ್ರಶ್ನೆಗಳಿರಲಿವೆ. ಆದರೆ, ವಿದ್ಯಾರ್ಥಿಗಳು 70 ಅಂಕಗಳ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕು.

ಪಠ್ಯಕ್ರಮ ಕಡಿತ: ದ್ವಿತೀಯ ಪಿಯು ಪಠ್ಯಕ್ರಮ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನ್ವಯಿಸುವುದರಿಂದ ಈ ಬಾರಿ ಭಾಷಾ ವಿಷಯದಲ್ಲಿ ಶೇ.70 ಭಾಗವನ್ನು ಮಾತ್ರ ಪರೀಕ್ಷೆಗೆ ಪರಿಗಣಿಸಲಾಗಿದೆ. ಆದರೆ, ವಿಷಯದಲ್ಲಿ ಶೇ.100 ಪಠ್ಯಕ್ರಮ ಯಥಾರೀತಿ ಮುಂದುವರಿದಿದೆ.

ವೆಬ್​ಸೈಟಿನಲ್ಲಿ ಮಾದರಿ ಪ್ರಶ್ನೆಪತ್ರಿಕೆ: ಪದವಿ ಪೂರ್ವ ಶಿಕ್ಷಣ ಇಲಾಖೆಯು ತನ್ನ ವೆಬ್​ಸೈಟ್ https://pue.karnataka.gov.in/new-page/II+PU+MODEL+QUESTION+PAPER+2021-22/kn ನಲ್ಲಿ ಎಲ್ಲ ವಿಷಯದ ಪ್ರಶ್ನೆಪತ್ರಿಕೆಯನ್ನು ಅಪ್​ಲೋಡ್ ಮಾಡಿದ್ದು, ಪ್ರಶ್ನೆಗಳನ್ನು ಅದೇ ಮಾದರಿಯಲ್ಲಿ ಕೇಳಲಾಗುತ್ತದೆ.

ವಿದ್ಯಾರ್ಥಿಸ್ನೇಹಿ ಪರೀಕ್ಷಾ ಕೇಂದ್ರ: ವಿದ್ಯಾರ್ಥಿಗಳು ಬೇರೆ ಕಾಲೇಜುಗಳಲ್ಲಿ ಪರೀಕ್ಷೆ ಬರೆಯಬೇಕಿರುವುದರಿಂದ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೆ ಕೊಂಚ ಆತಂಕ ಇದ್ದೇ ಇರುತ್ತದೆ. ಹೀಗಾಗಿ ಉಪನ್ಯಾಸಕರು, ಮೇಲ್ವಿಚಾರಕರು ಅವರಲ್ಲಿ ಉತ್ಸಾಹ ಮೂಡಿಸುವ ಕೆಲಸ ಮಾಡಲಿದ್ದಾರೆ. ಪರೀಕ್ಷಾ ಕೇಂದ್ರಗಳು ವಿದ್ಯಾರ್ಥಿಸ್ನೇಹಿ ಆಗಿರಲಿವೆ ಎಂದು ಗಣಾಚಾರಿ ಭರವಸೆ ನೀಡಿದರು. ಇದಲ್ಲದೆ, ಕೇಂದ್ರಗಳಿಗೆ ಸಿಸಿ ಕ್ಯಾಮರಾ ಅವಳಡಿಸಲಾಗಿದೆ. ಮೇಲ್ವಿಚಾರಕರಿಗೆ ವಿದ್ಯಾರ್ಥಿಗಳಿಗೆ ಎದುರಾಗುವ ಗೊಂದಲಗಳಿಗೆ ಪರಿಹಾರ ನೀಡುವಂತೆ ಸೂಚಿಸಲಾಗಿದೆ ಎಂದರು.

ಅಧಿಕ ಫಲಿತಾಂಶದ ನಿರೀಕ್ಷೆ: ಕಳೆದ ವರ್ಷ ಕರೊನಾ ಕಾರಣಕ್ಕೆ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಈ ಬಾರಿ ಪ್ರಶ್ನೆಪತ್ರಿಕೆ ಸುಲಭವಾಗಿರುವುದರಿಂದ ಹೆಚ್ಚಿನ ಫಲಿತಾಂಶ ನಿರೀಕ್ಷೆಯಲ್ಲಿ ಪಿಯು ಇಲಾಖೆ ಇದೆ.

ವಾಟ್ಸ್ಆ್ಯಪ್​ ಭಾಷೆ ಬೇಡ: ಆಂಗ್ಲ ಭಾಷಾ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಪದಗಳ ಮೇಲೆ ಹೆಚ್ಚು ನಿಗಾವಹಿಸಬೇಕು. ವಾಟ್ಸ್​ಆ್ಯಪ್​ ಚಾಟ್​ನ ಭಾಷೆಯನ್ನು ಬಳಕೆ ಮಾಡಿದರೆ, ಅಂಕಗಳನ್ನು ಕಡಿತಗೊಳಿಸಲಾಗುತ್ತದೆ ಅನೇಕರಿಗೆ ಪದಗಳಲ್ಲಿ ದೊಡ್ಡಕ್ಷರ ಬರೆಯಬೇಕು, ಚಿಕ್ಕ ಅಕ್ಷರ ಬಳಕೆ ಪರಿಜ್ಞಾನ ಇರುವುದಿಲ್ಲ ಎಂದು ಆಂಗ್ಲ ವಿಷಯತಜ್ಞ ಸದಾನಂದ ಹೇಳಿದರು.

ವಿದ್ಯಾರ್ಥಿಗಳಿಗೆ ಟಿಪ್ಸ್

  • ಪ್ರತಿ ವಿಷಯವನ್ನು ಮನನ ಮಾಡಿಕೊಳ್ಳಬೇಕು
  • ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಬೇಕು
  • ಪರೀಕ್ಷೆಯ ಭಯ, ಆತಂಕ ಬೇಡ
  • ಆರೋಗ್ಯದ ಬಗ್ಗೆ ಕಾಳಜಿ ಇರಲಿ
  • ಪರೀಕ್ಷೆ ಮುನ್ನಾ ದಿನವೇ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಿ
  • ಪ್ರವೇಶ ಪತ್ರ ಮರೆಯದಿರಿ

ವಿಷಯತಜ್ಞರ ಸಲಹೆ