PhD Holder Works As Cab Driver
- ಮೂವತ್ತು ಸಾವಿರ ಸಂಬಳ ಜೀವನ ನಿರ್ವಹಣೆಗೆ ಸಾಕಾಗದೆ ಕ್ಯಾಬ್ ಓಡಿಸುವ ಗೆಸ್ಟ್ ಲೆಕ್ಚರರ್
- ಡಾ. ಇ. ತಿರುಮಲೈ ರಾಜಾ ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್ಡಿ ಪಡೆದಿದ್ದಾರೆ ಎಂದು ಎಕ್ಸ್ನಲ್ಲಿ ಉಲ್ಲೇಖ
- ಡಾ. ಇ. ತಿರುಮಲೈ ರಾಜಾ ಬಗ್ಗೆ ಎಕ್ಸ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಬೇಸರ ವ್ಯಕ್ತ
ನವದೆಹಲಿ: ಭಾರತದಲ್ಲಿ ಎಷ್ಟೇ ಉನ್ನತ ಶಿಕ್ಷಣ ಪಡೆದುಕೊಂಡಿದ್ದರೂ, ಡಬಲ್ ಡಿಗ್ರಿಗಳನ್ನು ಮಾಡಿದ್ದರೂ ಸಹ ಹೊಟ್ಟೆ ಪಾಡಿಗೆ, ಜೀವನ ನಿರ್ವಹಣೆಗೆ ಉಬರ್, ಓಲಾ ಕ್ಯಾಬ್ ಡ್ರೈವರ್ಗಳಾಗಿ ದುಡಿದು ಸಂಪಾದನೆ ಹೆಚ್ಚಿಸಿಕೊಳ್ಳೋದು ಮಾತ್ರ ತಪ್ಪೋದಿಲ್ಲ ಎನ್ನುವುದಕ್ಕೆ ತಮಿಳುನಾಡಿನ ಪಿಎಚ್ಡಿ ಪದವೀದರ ತಿರುಮಲೈ ರಾಜಾ ಸಾಕ್ಷಿಯಾಗಿ ಹೊರಹೊಮ್ಮಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ವೈರಲ್
ಹೌದು, ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್ಡಿ ಪಡೆದಿರುವ ಡಾ. ಇ. ತಿರುಮಲೈ ರಾಜಾ ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ಮೂವತ್ತು ಸಾವಿರ ಗಳಿಸೋ ಇವರು, ಚೆನ್ನೈನಂತ ನಗರದಲ್ಲಿ ಜೀವನ ನಡೆಸಲು ಸಂಬಳ ಸಾಕಾಗೋದಿಲ್ಲ ಎಂದು ಮುಂಜಾನೆ ಲೆಕ್ಚರರ್ ಆಗಿ ದುಡಿದು, ಸಂಜೆ ಕ್ಯಾಬ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎಕ್ಸ್ ಬಳಕೆದಾರ ಅನಂತ್ ರೂಪನಗುಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಡಾ. ಇ. ತಿರುಮಲೈ ರಾಜಾ ನಾಮಕಲ್ನಲ್ಲಿ ವಾಸಿಸುತ್ತಿದ್ದು, ಅವರಿಗೆ ಶಾಲೆಗೆ ಹೋಗುವ ವಯಸ್ಸಿನ ಇಬ್ಬರು ಮಕ್ಕಳು ಇದ್ದಾರೆ. ಕುಟುಂಬದ ನಿರ್ವಹಣೆಗಾಗಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣದ ಅಗತ್ಯ ಹೆಚ್ಚಿರುವ ಕಾರಣ ಬಿಡುವಿದ್ದಾಗ ಕ್ಯಾಬ್ ಡ್ರೈವರ್ ಆಗಿ, ಮುಂಜಾನೆ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಮನೆಯ ಖರ್ಚುಗಳನ್ನು ನಿಭಾಯಿಸುತ್ತಿದ್ದಾರೆ.
ತಿರುಮಲೈ ರಾಜಾರ ಪದವಿ ಲಿಸ್ಟ್ ಹೀಗಿದೆ
- ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್,ಡಿ
- ಇಂಗ್ಲಿಷ್ ಸಾಹಿತ್ಯದಲ್ಲಿ ಎಂಫಿಲ್ ಮತ್ತು ಎಂಎ
- ಮನೋವಿಜ್ಞಾನನದಲ್ಲಿ ಎಂಎಸ್ಸಿ ಬ್ಯಾಚುಲರ್ ಆಫ್ ಎಜುಕೇಷನ್ ಹಾಗೂ ಶಿಕ್ಷಕರ ತರಬಬೇತಿಯಲ್ಲಿ ಡಿಪ್ಲಮೋ
ಹಾಗೂ ಇಂಡ್ಲೋ ಆಂಗ್ಲಿಯನ್ ಬರವಣಿಗೆಯಲ್ಲಿ ಕಪ್ಪು ಹಾಸ್ಯದ ಕುರಿತು ಸಂಶೋಧನೆ ನಡೆಸಿ ಪಿಎಚ್ಡಿ ಪಡೆದುಕೊಂಡಿದ್ದಾರೆ. ಇನ್ನು ಯುಜಿಸಿ ಮಾನ್ಯತೆ ಪಡೆದ ಜರ್ನಲ್ಗಳಲ್ಲಿ ಸಂಶೋಧನಾ ಪ್ರಬಂಧ ಪ್ರಕಟಿಸಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಕಿರಣದಲ್ಲಿ ಭಾಗವಹಿಸಿರುವ ನಿಪುಣತೆ ಇವರಿಗೆ ಇದೆ.
ಅನಂತ್ ರೂಪನಗುಡಿ ಅವರು ಹಂಚಿಕೊಂಡಿರುವ ಮಾಹಿತಿ ಪ್ರಕಾರ ತಿರುಮಲೈ ರಾಜಾ ಐಕ್ಯೂಸಿ ಸಂಯೋಜಕ ಹಾಗೂ ಪರೀಕ್ಷಾ ಕೋಶ ಸಂಶೋಧಕ, ಸಂಪಾದಕ, ಭಾಷಣಾಕಾರ ಮತ್ತು ಸಂವಹನ ಕೌಶಲ್ಯದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಉಲ್ಲೇಖವಾಗಿದೆ. ಹಿಂದೆ ನಮಕಲ್ನಲ್ಲಿ ಕೆಲಸ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ರಾಜಾ ಅವರು ತಿಂಗಳಿಗೆ 20 ಸಾವಿರ ಮಾತ್ರ ಗಳಿಸುತ್ತಿದ್ದರು. ಸದ್ಯ ಪ್ರೆಸಿಡೆನ್ಸಸಿ ಕಾಲೇಜಿನಲ್ಲಿ ಮೂವತ್ತು ಸಾವಿರ ರೂಪಾಯಿಗೆ ಗೆಸ್ಟ್ ಲೆಕ್ಚರರ್ ಆಗಿದ್ದಾರೆ.
ಅನಂತ್ ರೂಪನಗುಡಿ ಹೇಳಿದ್ದಿಷ್ಟು
ನಮ್ಮ ದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸುಶಿಕ್ಷಿತ ಜನರ ಸ್ಥಿತಿ ಹೀಗಿದೆ, ಖಾಸಗಿ ಕಾಲೇಜಿನಲ್ಲಿ ಇಷ್ಟೊಂದು ಶಿಕ್ಷಿತರಾದವರಿಗೆ ಹೀನಾತಿಹೀನವಾಹಿ ವೇತನ ನೀಡುತ್ತಿವೆ, ಇದರಿಂದಾಗಿ ಅವರು ಸಮಸ್ಯೆಗೆ ಸಿಲುಕಿದ್ದಾರೆ. ಅವರ ಅರ್ಹತೆಗಳಿಗೆ ಅನುಗುಣವಾಗಿಯೂ ಅವರಿಗೆ ಯಾವುದೇ ನಿಗದಿತ ಕನಿಷ್ಠ ವೇತನವಿಲ್ಲ. ಅವರಿಗೆ ಉತ್ತಮ ಶೈಕ್ಷಣಿಕ ಹುದ್ದೆ ಪಡೆಯಲು ಸಹಾಯ ಮಾಡುವ ಯಾರಾದರೂ ಇದ್ದರೆ, ದಯವಿಟ್ಟು ನನಗೆ ಸಂದೇಶ ಕಳುಹಿಸಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).