ಹೈದರಾಬಾದ್: ಮುಖಕ್ಕೆ ಧರಿಸುವ ಮಾಸ್ಕ್ನಿಂದ ಬೈಕ್ ನಂಬರ್ ಪ್ಲೇಟ್ ಕಾಣದಂತೆ ಮುಚ್ಚಿ ತಿರುಗಾಡುತ್ತಿದ್ದ ಸವಾರನ ವಿರುದ್ಧ ಹೈದರಾಬಾದಿನ ಪಂಜಗುಟ್ಟ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಂತಹ ಪ್ರಕರಣ ಇದೇ ಮೊದಲೇನಲ್ಲ. ಕೇವಲ ಒಂದು ತಿಂಗಳಲ್ಲಿ 4 ಪ್ರಕರಣಗಳು ವರದಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೈಕ್ ಸವಾರನನ್ನು ಸರ್ಫಜ್ ಖಾನ್ ಎಂದು ಗುರುತಿಸಲಾಗಿದೆ. ಈತ ಆಸಿಫ್ ನಗರದ ನಿವಾಸಿ. ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ 420 ಮತ್ತು 511 ಸೆಕ್ಷನ್ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಬಂಧನ ಭೀತಿಯು ಎದುರಾಗಿದೆ.
ಈ ಬಗ್ಗೆ ಮಾತನಾಡಿರುವ ಪಂಜಗುಟ್ಟ ಸಂಚಾರಿ ಠಾಣಾ ಇನ್ಸ್ಪೆಕ್ಟರ್ ಎಂ. ರವಿ, ಆರೋಪಿಯು ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆರೋಪಿಯನ್ನು ಮಂಗಳವಾರ ಸಂಜೆ ಹೈದರಾಬಾದ್ನ ಸೋಮಾಜಿಗುಡದಲ್ಲಿ ವಶಕ್ಕೆ ಪಡೆಯಲಾಯಿತು ಎಂದು ತಿಳಿಸಿದ್ದಾರೆ.
ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗೇ ಮಾಸ್ಕ್ನಿಂದ ನಂಬರ್ ಪ್ಲೇಟ್ ಮುಚ್ಚಿ ಓಡಾಡುತ್ತಿದ್ದ. ಇದೀಗ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ ಎಂದು ರವಿ ಹೇಳಿದರು. (ಏಜೆನ್ಸೀಸ್)‘