ನ್ಯೂಸ್

ಪಿಜಿ ವೈದ್ಯಕೀಯ ಪ್ರವೇಶ: ನಾಳೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟ

ಬೆಂಗಳೂರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ)2023ನೇ ಸಾಲಿನ ಸ್ನಾತಕೋತ್ತರ ಪದವಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಡಿಎನ್‌ಬಿ ಕೋರ್ಸುಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಸರ್ಕಾರವು ನೀಡಿರುವ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ಆ.21ರ ಸಂಜೆ 7 ಗಂಟೆಯ ನಂತರ ವೆಬ್ಸೈಟಿನಲ್ಲಿ ಪ್ರಕಟಿಸಲಿದೆ.

ಅರ್ಹ ಅಭ್ಯರ್ಥಿಗಳು ಆ.22ರ ಬೆಳಗ್ಗೆ 11 ರಿಂದ ಆ.25ರ ಬೆಳಗ್ಗೆ 11ರ ವರೆಗೆ ಆದ್ಯತಾ ಕ್ರಮದಲ್ಲಿ ಇಚ್ಚೆ / ಆಯ್ಕೆಗಳನ್ನು ದಾಖಲಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.

ಮೊದಲನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕೂಡ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ನಿಗದಿಪಡಿಸಿರುವ ಶೈಕ್ಷಣಿಕೆ ಅರ್ಹತೆ, ಕಾಲೇಜುಗಳ ಪ್ರವೇಶ, ಸೀಟು ಹಂಚಿಕೆಗೆ ಸಂಬಂಧಿಸಿದ ವಿಶ್ವವಿದ್ಯಾಲಯಗಳು, ಅಪೆಕ್ಸ್ ಸಂಸ್ಥೆಗಳು ಕಾಲಕಾಲಕ್ಕೆ ನಿಗದಿಡಿಸುವ ನಿಯಮಗಳು, ಅನುಮೋದನೆಗೆ / ಷರತ್ತಿಗೆ ಒಳಪಟ್ಟಿರುತ್ತವೆ. ಪ್ರಾಧಿಕಾರವು ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಅಥವಾ ನಿಬಂಧನೆಗಳನ್ನು ಪೂರೈಸದ ಅಭ್ಯರ್ಥಿಯ ಪ್ರವೇಶವನ್ನು ಯಾವುದೇ ಸಮಯದಲ್ಲಿ ಹಿಂತೆಗೆದುಕೊಳ್ಳುವ ಹಕ್ಕನ್ನು ಕೆಇಎ ಹೊಂದಿರುತ್ತದೆ. ಈ ಬಗ್ಗೆ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಮಾಹಿತಿಯನ್ನು ಕಳುಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.