ತಿರುವನಂತಪುರಂ: ದೇವರ ರಾಜ್ಯ ಕೇರಳ ಇದೀಗ ಮತ್ತೊಮ್ಮೆ ಹೇಯಕೃತ್ಯವೊಂದಕ್ಕೆ ಸಾಕ್ಷಿಯಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಮೆರವಣಿಗೆಯು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ತೆನಿಪಾಲಂ ಪಟ್ಟಣದಲ್ಲಿ ಪಿಎಫ್ಐ ಕಾರ್ಯಕರ್ತರು ಶನಿವಾರ ಮೆರವಣಿಗೆ ನಡೆಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ನ ಸಮವಸ್ತ್ರ ಧರಿಸಿದ್ದ ತಮ್ಮದೇ ಸಂಘಟನೆಯ ಕಾರ್ಯಕರ್ತರಿಬ್ಬರ ಕೈಗೆ ಚೈನಿನಿಂದ ಬಿಗಿದು ಅವರನ್ನು ರಸ್ತೆಯ ಮೇಲೆ ಯಾವುದೋ ಅಪರಾಧ ಮಾಡಿದವರ ರೀತಿಯಲ್ಲಿ ಕರೆದೊಯ್ಯಲಾಗಿದೆ. ಅದರ ಜತೆಯಲ್ಲಿ ಬ್ರಿಟಿಷ್ ಅಧಿಕಾರಿಯ ಬಟ್ಟೆ ಧರಿಸಿದ್ದವರನ್ನೂ ಅಪರಾಧಿಗಳಂತೆ ಕರೆದೊಯ್ಯಲಾಗಿದೆ. ಮೆರವಣಿಗೆಯಲ್ಲಿ ಇಸ್ಲಾಮಿಕ್ ಪಠಣೆಗಳು ಕೇಳಿಬಂದಿವೆ.
ಕೆಲವು ಮೂಲಗಳು ಇಂದು ಪಿಎಫ್‌ಐನ ರ್ಯಾಲಿಯು 1921 ರ ಮಲಬಾರ್ ಹಿಂದೂ ಜನಾಂಗೀಯ ಹತ್ಯಾಕಾಂಡ ಅಥವಾ ಮೊಪ್ಲಾ ಹತ್ಯಾಕಾಂಡದ (ಮಲಬಾರ್ ದಂಗೆ) ಶತಮಾನೋತ್ಸವವನ್ನು ಆಚರಿಸುವ ಭಾಗವಾಗಿತ್ತು ಎನ್ನಲಾಗಿದೆ.
ಪಿಎಫ್ಐ ಈ ರೀತಿ ಮೆರವಣಿಗೆ ಮಾಡಿರುವ ಬಗ್ಗೆ ಅನೇಕ ರಾಜಕೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)