ನ್ಯೂಸ್

ಪಿಎಫ್​ಐ ನಿಷೇಧ ಪ್ರಕ್ರಿಯೆ ಆರಂಭ ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ನಿಷೇಧಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಬುಧವಾರ ತಿಳಿಸಿದೆ. ತೀವ್ರಗಾಮಿಯಾದ ಈ ಇಸ್ಲಾಮಿಕ್ ಸಂಘಟನೆ ಈಗಾಗಲೇ ಹಲವು ರಾಜ್ಯಗಳಲ್ಲಿ ನಿಷೇಧಕ್ಕೆ ಒಳಗಾಗಿದ್ದು, ಕೇಂದ್ರ ಸರ್ಕಾರ ಕೂಡ ಇದೇ ಹಾದಿಯಲ್ಲಿ ಇದೆ ಎಂದು ಸಿಜೆಐ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠಕ್ಕೆ ಸರ್ಕಾರ ಹೇಳಿದೆ.

ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್ ಬಂಧನ ಪ್ರಕರಣದಲ್ಲಿ ಉತ್ತರ ಪ್ರದೇಶದ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆರೋಪಿಯು ಪಿಎಫ್​ಐ ಜತೆ ಗುರುತಿಸಿಕೊಂಡಿದ್ದಾರೆ. ಇದರ ಅನೇಕ ಪದಾಧಿಕಾರಿಗಳು ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್​ವೆುಂಟ್ ಆಫ್ ಇಂಡಿಯಾದ (ಸಿಮಿ) ನಿಕಟ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು. ಆಗ ನ್ಯಾಯಪೀಠ, ಪಿಎಫ್​ಐ ಅನ್ನು ನಿಷೇಧಿಸಲಾಗಿದೆಯೇ? ಎಂದು ಪ್ರಶ್ನಿಸಿತು. ಇನ್ನೂ ಇಲ್ಲ, ಇದು ಪ್ರಕ್ರಿಯೆ ಹಂತದಲ್ಲಿ ಇದೆ ಎಂದು ಮೆಹ್ತಾ ಜವಾಬು ನೀಡಿದರು.

ಏನಿದು ಪ್ರಕರಣ?: ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ದಲಿತ ಯುವತಿ ಸಾವನ್ನಪ್ಪಿದ ನಂತರ ಹಥರಾಸ್​ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಲು ಕಪ್ಪನ್ ಮತ್ತು ಅವರ ನಾಲ್ವರು ಸಂಗಡಿಗರು ಹೋಗುತ್ತಿದ್ದಾಗ ಮಥುರಾದಲ್ಲಿ ಅವರನ್ನು ಬಂಧಿಸಲಾಗಿತ್ತು. ಕಪ್ಪನ್ ವಿರುದ್ಧ ಭಾರತೀಯ ದಂಡಸಂಹಿತೆ ವಿವಿಧ ಸೆಕ್ಷನ್ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅನ್ವಯ ಪ್ರಕರಣ ದಾಖಲಾಗಿದೆ.