ನ್ಯೂಸ್

ವಾಹನ ಸವಾರರಿಗೆ ಗುಡ್‌ ನ್ಯೂಸ್; ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಭಾರೀ ಇಳಿಕೆ ಸಾಧ್ಯತೆ!

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಆಗಿದೆ. ಇದೇ ಸ್ಥಿತಿ ಮುಂದುವರೆದರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ದರ ಕಡಿತವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತಾಗಿ ಮಾಹಿತಿ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್, ಮುಂದಿನ ಕೆಲ ಕಾಲ ಜಾಗತಿಕ ಮಟ್ಟದಲ್ಲಿ ಪೆಟ್ರೋಲಿಯಂ ಮಾರುಕಟ್ಟೆಯಲ್ಲಿ ಈಗ ಇರುವಷ್ಟೇ ಕಡಿಮೆ ಬೆಲೆಗೆ ಕಚ್ಚಾ ತೈಲ ಲಭಿಸಿದರೆ ಭಾರತದಲ್ಲಿ ಇರುವ ತೈಲ ಸಂಸ್ಕರಣಾ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಇಳಕೆ ಮಾಡುವ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.

ಜಾಗತಿಕ ಬದಲಾವಣೆಯಿಂದ ಅನಿರೀಕ್ಷಿತವಾಗಿ ಭಾರೀ ಪ್ರಮಾಣದ ಲಾಭಗಳಿಸುವ ಕಂಪನಿಗಳ ಮೇಲೆ ವಿಧಿಸಲಾಗುವ ವಿಂಡ್‌ಫಾಲ್ ತೆರಿಗೆಯನ್ನು ರದ್ದು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸುಳಿವು ನೀಡಿರುವ ಪೆಟ್ರೋಲಿಯಂ ಕಾರ್ಯದರ್ಶಿಗಳು, ಭಾರತದ ತೈಲ ಸಚಿವಾಲಯ ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಈ ತೀರ್ಮಾನ ಕೈಗೊಂಡರೂ ಕೂಡಾ ದೇಶದಲ್ಲಿ ತೈಲ ಬೆಲೆ ದರ ಇಳಿಕೆ ಕಾಣಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಮಂಗಳವಾರ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್​ಗೆ 70 ಡಾಲರ್​ನಂತೆ ಮಾರಾವಾಗಿದೆ. ಡಿಸೆಂಬರ್ 2021ರ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸಾಕಷ್ಟು ಇಳಿಕೆ ಕಂಡಿದೆ. ಗುರುವಾರ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್​ಗೆ 71 ಟಾಲರ್ ಹಾಗೂ ಅಮೆರಿಕದ ವೆಸ್ಟ್ ಟೆಕ್ಸಾಸ್​ ಇಂಟರ್​ ಮೀಡಿಯೇಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್​ಗೆ 68 ಡಾಲರ್ ಆಗಿದೆ.

ಜಾಗತಿಕ ಮಟ್ಟದಲ್ಲಿ ತೈಲದ ಬೇಡಿಕೆಗೆ ಪ್ರತಿ ದಿನಕ್ಕೆ 2.03 ಮಿಲಿಯನ್ ಬ್ಯಾರಲ್‌ಗೆ ಇಳಿಕೆ ಕಂಡಿದೆ. ಈ ಎಲ್ಲಾ ಬೆಳವಣಿಗೆಗಳೂ ಭಾರತದಲ್ಲಿ ತೈಲ ಬೆಲೆ ಕಡಿಮೆ ಆಗಬಹುದಾದ ಸೂಚನೆ ನೀಡುತ್ತಿವೆ. ಅಲ್ಲದೆ, ದೀಪಾವಳಿ ಹಬ್ಬದ ವೇಳೆಗೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಪ್ರತಿ ಲೀಟರ್​ಗೆ 2 ರೂಪಾಯಿ ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಬ್ರೋಕರೇಜ್ ಸಂಸ್ಥೆ ಎಮ್ಕೆ ಗ್ಲೋಬಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.