petrol pump 
ನ್ಯೂಸ್

Petrol, Diesel Price: ಪೆಟ್ರೋಲ್, ಡೀಸೆಲ್​ ಬೆಲೆ ಇಳಿಕೆ? ಲಾಭದಲ್ಲಿರುವ ತೈಲ ಕಂಪನಿಗಳ ಕುರಿತು ರೇಟಿಂಗ್ ಏಜೆನ್ಸಿ ಹೇಳುವುದೇನು? ಇಲ್ಲಿದೆ ಮಾಹಿತಿ

ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗುತ್ತಿದ್ದು, ಸುಮಾರು ದಿನಗಳಿಂದ 1ನೂರು ರೂಗಳ ಆಸುಪಾಸಿನಲ್ಲಿ ಸ್ಥಿರವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol, Diesel Price) ಲೀಟರ್ ಗೆ ರೂ. 2-3ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.

ಎರಡು ವರ್ಷಗಳಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಯಾಗಿಲ್ಲ. ದೇಶದಲ್ಲಿ ಸಾರ್ವತ್ರಿಕ ಚುನಾವಣೆಗೂ ಮುನ್ನ ತೈಲ ಕಂಪನಿಗಳು ಶೇ.2ರಷ್ಟು ಇಳಿಕೆ ಮಾಡಿದ್ದವು. ಆದರೆ ಅಲ್ಲಿಂದೀಚೆಗೆ ಯಾವುದೇ ಬದಲಾವಣೆ ಇಲ್ಲ. ಆದರೆ ಇತ್ತೀಚೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದರೂ ಕೇಂದ್ರ ಮತ್ತು ತೈಲ ಕಂಪನಿಗಳು ದೇಶೀಯವಾಗಿ ಬದಲಾವಣೆಗೆ ಪ್ರಯತ್ನಿಸಿಲ್ಲ.

ಇಂಧನ ಬೆಲೆ ಇಂದಲ್ಲ ನಾಳೆ ಕಡಿಮೆಯಾಗಬಹುದೆಂಬ ನಿರೀಕ್ಷೆಯಲ್ಲಿ ಇಲ್ಲಿನ ಜನರು ಕಾಯುತ್ತಿದ್ದಾರೆ. ಇದೀಗ ಪ್ರಮುಖ ರೇಟಿಂಗ್ ಏಜೆನ್ಸಿಗಳಲ್ಲಿ ಒಂದಾದ ಇಕ್ರಾ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ತೈಲ ಬೆಲೆ ಇಳಿಕೆಯ ಪರಿಣಾಮ ದೀಪಾವಳಿಗೂ ಮುನ್ನ ಪ್ರತಿ ಲೀಟರ್‌ಗೆ 2ರೂ.ನಿಂದ 3ರೂ.ಗೆ ಇಳಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಭಾರತವು ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಸರಾಸರಿ ಬೆಲೆ 20246ರ ಮಾರ್ಚ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ 83-84 ಡಾಲರ್ ಇದ್ದು, ಸೆಪ್ಟೆಂಬರ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ 74ಡಾಲರ್​ಗೆ ಇಳಿದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಕಡಿಮೆಯಾಗಿರುವುದರಿಂದ ಸಾರ್ವಜನಿಕ ವಲಯದ ತೈಲ ಕಂಪನಿಗಳ ವ್ಯವಹಾರ ಸುಧಾರಿಸಿದೆ. ಇದು ಹೀಗೆಯೇ ಹೀಗೆ ಮುಂದುವರಿಯುವ ಸಾಧ್ಯತೆಯಿದ್ದು, ಚಿಲ್ಲರೆ ತೈಲ ದರ ಇಳಿಕೆಯಾಗಬಹುದು ಎಂಬ ಅಭಿಪ್ರಾಯವನ್ನು ರೇಟಿಂಗ್ ಸಂಸ್ಥೆ ವ್ಯಕ್ತಪಡಿಸಿದೆ.

ಅಂತಾರಾಷ್ಟ್ರೀಯ ದರಗಳಿಗೆ ಹೋಲಿಸಿದರೆ, ಭಾರತೀಯ ತೈಲ ಕಂಪನಿಗಳು ಪೆಟ್ರೋಲ್ ಪ್ರತಿ ಲೀಟರ್​ಗೆ 15ರೂ., ಡೀಸೆಲ್ ಮೇಲೆ 12ರೂ. ಸಂಪಾದನೆ ಮಾಡುತ್ತಿವೆ ಎಂದು ಐಕ್ರಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಗಿರೀಶ್ ಕುಮಾರ್ ತಿಳಿಸಿದ್ದಾರೆ.

ತೈಲ ಕಂಪನಿಗಳು ಜಾಣಮೌನ: Petrol, Diesel Price

ಇನ್ನು 2021 ರಿಂದ ಅಂತರರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ದೇಶೀಯವಾಗಿ ಇಂಧನ ಬೆಲೆ ಮಾರ್ಪಡಿಸುವ ನಿಯಮ ಜಾರಿಯಲ್ಲಿದ್ದರೂ ತೈಲ ಕಂಪನಿಗಳು ಜಾಣಮೌನವಹಿಸಿವೆ. ಈ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿದಿನ ಏರಿಳಿತವಾಗುತ್ತಿತ್ತು. ನಂತರ ಈ ವಿಧಾನ ತೆರೆಮರೆಗೆ ಸರಿದಿದೆ. ತೈಲ ಉತ್ಪನ್ನಗಳ ರಫ್ತಿನ ಮೇಲಿನ ವಿಂಡ್ ಫಾಲ್ ಟ್ಯಾಕ್ಸ್ ಅನ್ನು ಕೇಂದ್ರ ಹಿಂಪಡೆದಿರುವುದು ತಿಳಿದ ಸಂಗತಿಯೇ.