ಸಾಂದರ್ಭಿಕ ಚಿತ್ರ 
ನ್ಯೂಸ್

ಪೆಟ್ರೋಲ್, ಡೀಸೆಲ್, ಹೈಬ್ರಿಡ್ ಅಥವಾ ಇವಿ; ಕಾರು ಖರೀದಿಸುವವರಿಗೆ 5 ವರ್ಷಗಳ ಖರ್ಚಿನ ಪಕ್ಕಾ ರಿಪೋರ್ಟ್ ಇಲ್ಲಿದೆ! Car Buying Guide

ನವದೆಹಲಿ: ಭಾರತದಲ್ಲಿ ಅದರಲ್ಲೂ ಮಧ್ಯಮ ವರ್ಗ ಹಾಗೂ ಬಡ ವರ್ಗದ ಜನರಿಗೆ ಕಾರಿನ ಖರೀದಿ ಎನ್ನವುದು ಕೇವಲ ಒಂದು ವಸ್ತುವಿನ ಖರೀದಿ ಅಲ್ಲ. ಬದಲಾಗಿ ಅದೊಂದು ಅವರ ಭವಿಷ್ಯಕ್ಕೆ ಮಾಡಿದ ಹೂಡಿಕೆ ಎಂದೇ ಭಾವಿಸಲಾಗುತ್ತದೆ.

ರಕ್ತ, ಬೆವರನ್ನು ಸುರಿಸಿ ದುಡಿದ ಹಣವನ್ನು ತಮ್ಮ ಕನಸಿನ ಕಾರನ್ನು ಈ ವರ್ಗದ ಜನ ಖರೀದಿಸುತ್ತಾರೆ. ಆದರೆ ಕಾರಿನ ಖರೀದಿ ಎಂದರೆ ಕೇವಲ ಶೋರೂಮ್​ಗೆ ಹೋಗಿ ಆಯ್ಕೆ ಮಾಡಿದ ಕಾರನ್ನು ತೆಗೆದುಕೊಂಡು ಮನೆಗೆ ಬರುವುದಲ್ಲ.

ಅದರಲ್ಲೂ ಕಾರನ್ನು ಖರೀದಿಸಿ ಮನೆಗೆ ತಂದ ಮೇಲೆ ಅದರ ಅಸಲಿ ಖರ್ಚು ಎಷ್ಟೆಂದು ತಿಳಿಯುತ್ತದೆ. ಪೆಟ್ರೋಲ್, ಡೀಸೆಲ್ ಕರೆಂಟ್ ಬಿಲ್, ವರ್ಷಕ್ಕೊಮ್ಮೆ ಇನ್ಶೂರೆನ್ಸ್, ಸರ್ವಿಸಿಂಗ್, ಟೈರ್ ಬದಲಾವಣೆ ಹೀಗೆ ಖರ್ಚಿನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಹಾಗಾದರೆ, ಇಂದಿನ ಕಾಲದಲ್ಲಿ ಪೆಟ್ರೋಲ್, ಡೀಸೆಲ್, ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ (EV) ಈ ನಾಲ್ಕರಲ್ಲಿ ಯಾವ ಮಾದರಿಯ ಕಾರನ್ನು ಖರೀದಿಸಿದರೆ 5 ವರ್ಷಗಳಲ್ಲಿ ನಿಮ್ಮ ಜೇಬಿಗೆ ಹೊರೆಯಾಗುವುದಿಲ್ಲ ಎಂಬ ಕುರಿತು ಇಂದು ತಿಳಿಯೋಣ.

1,000 ರೂ. ಖರ್ಚು ಮಾಡಿದರೆ ಯಾವ ಕಾರು ಎಷ್ಟು ದೂರ ಓಡುತ್ತೆ?

ಮೊದಲಿಗೆ ನಾವು ದಿನನಿತ್ಯ ಹಾಕಿಸುವ ಇಂಧನ ಅಥವಾ ಚಾರ್ಜಿಂಗ್ ವೆಚ್ಚವನ್ನು ನೋಡೋಣ. ನೀವು 1,000 ರೂ. ಖರ್ಚು ಮಾಡಿದರೆ ಯಾವ ಕಾರು ಎಷ್ಟು ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಎಂದು ತಿಳಿಯೋಣ.

ಪೆಟ್ರೋಲ್ ಕಾರು: ಸುಮಾರು 147 ಕಿ.ಮೀ (ಲೀಟರ್‌ಗೆ 102 ರೂ. ಹಾಗೂ 15 ಕಿ.ಮೀ ಮೈಲೇಜ್ ಲೆಕ್ಕದಲ್ಲಿ).

ಡೀಸೆಲ್ ಕಾರು: ಸುಮಾರು 210 ಕಿ.ಮೀ (ಲೀಟರ್‌ಗೆ 95 ರೂ. ಹಾಗೂ 20 ಕಿ.ಮೀ ಮೈಲೇಜ್ ಲೆಕ್ಕದಲ್ಲಿ).

ಸ್ಟ್ರಾಂಗ್ ಹೈಬ್ರಿಡ್ ಕಾರು: ಸುಮಾರು 215 ಕಿ.ಮೀ (ಲೀಟರ್‌ಗೆ 102 ರೂ. ಹಾಗೂ 22 ಕಿ.ಮೀ ಮೈಲೇಜ್ ಲೆಕ್ಕದಲ್ಲಿ).

ಎಲೆಕ್ಟ್ರಿಕ್ ಕಾರು (EV): ಬರೋಬ್ಬರಿ 533 ಕಿ.ಮೀ (ಸಾರ್ವಜನಿಕ ಚಾರ್ಜಿಂಗ್ ಕೇಂದ್ರದಲ್ಲಿ ಪ್ರತಿ ಯೂನಿಟ್‌ಗೆ 15 ರೂ. ಹಾಗೂ 8 ಕಿ.ಮೀ ರೇಂಜ್ ಲೆಕ್ಕದಲ್ಲಿ. ಮನೆಯಲ್ಲಿ ಚಾರ್ಜ್ ಮಾಡಿದರೆ ಇನ್ನೂ ಅಗ್ಗ).

5 ವರ್ಷಗಳಲ್ಲಿ 60,000 ಕಿ.ಮೀ ಓಡಿಸಿದರೆ ಒಟ್ಟು ಖರ್ಚು ಎಷ್ಟಾಗುತ್ತೆ?

ನೀವು ತಿಂಗಳಿಗೆ 1,000 ಕಿ.ಮೀ ಅಂದರೆ 5 ವರ್ಷಗಳಲ್ಲಿ ಒಟ್ಟು 60,000 ಕಿ.ಮೀ ಕಾರು ಓಡಿಸುತ್ತೀರಿ ಎಂದು ಇಟ್ಟುಕೊಳ್ಳೋಣ. ಇದಕ್ಕಾಗಿ ಜನಪ್ರಿಯ ಹ್ಯುಂಡೈ ಕ್ರೆಟಾ (ಪೆಟ್ರೋಲ್, ಡೀಸೆಲ್, ಇವಿ) ಹಾಗೂ ಹೈಬ್ರಿಡ್‌ಗಾಗಿ ಟೊಯೊಟಾ ಹೈರೈಡರ್ ಕಾರುಗಳ ಖರೀದಿ ಬೆಲೆ, ಇಂಧನ, ಸರ್ವಿಸಿಂಗ್ ಮತ್ತು ಇನ್ಶೂರೆನ್ಸ್ ಸೇರಿಸಿ 5 ವರ್ಷಗಳ ಒಟ್ಟು ವೆಚ್ಚವನ್ನು ಲೆಕ್ಕ ಹಾಕಿದಾಗ.

1. ಪೆಟ್ರೋಲ್ ಕಾರು

ಪೆಟ್ರೋಲ್ ಕಾರು ಖರೀದಿಸುವಾಗ ಅಗ್ಗ ಎನಿಸಬಹುದು (ಬೆಲೆ 12.80 ಲಕ್ಷ ರೂಪಾಯಿ). ಆದರೆ 5 ವರ್ಷಕ್ಕೆ ಪೆಟ್ರೋಲ್‌ಗೇ 4.08 ಲಕ್ಷ ಖರ್ಚಾಗುತ್ತದೆ. ಜೊತೆಗೆ ಸರ್ವಿಸಿಂಗ್ ಮತ್ತು ವಿಮೆಗೆ 1.30 ಲಕ್ಷ ಸೇರಿದರೆ ಒಟ್ಟು 18.18 ಲಕ್ಷ ರೂಪಾಯಿ ಖರ್ಚಾಗುತ್ತದೆ.

2. ಡೀಸೆಲ್ ಕಾರು

ಡೀಸೆಲ್ ಕಾರಿನ ಬೆಲೆ 15 ಲಕ್ಷ. ಮೈಲೇಜ್ ಚೆನ್ನಾಗಿರುವುದರಿಂದ 5 ವರ್ಷಕ್ಕೆ ಡೀಸೆಲ್ ಖರ್ಚು 2.86 ಲಕ್ಷ ಮಾತ್ರ. ಆದರೆ ಸರ್ವಿಸಿಂಗ್ ಮತ್ತು ವಿಮೆಗೆ 1.90 ಲಕ್ಷ ತಗಲುತ್ತದೆ. ಒಟ್ಟು ಖರ್ಚು 19.76 ಲಕ್ಷ ರೂಪಾಯಿ.

3. ಸ್ಟ್ರಾಂಗ್ ಹೈಬ್ರಿಡ್ ಕಾರು

ಟೊಯೊಟಾ ಹೈರೈಡರ್ ಹೈಬ್ರಿಡ್ ಬೆಲೆ 17.10 ಲಕ್ಷ. ಇದು ಪೆಟ್ರೋಲ್ ಮತ್ತು ಬ್ಯಾಟರಿ ಎರಡರಲ್ಲೂ ಓಡುವುದರಿಂದ ಟ್ರಾಫಿಕ್‌ನಲ್ಲಿ ಭರ್ಜರಿ ಮೈಲೇಜ್ ಕೊಡುತ್ತದೆ. 5 ವರ್ಷಕ್ಕೆ ಪೆಟ್ರೋಲ್ ಖರ್ಚು 2.78 ಲಕ್ಷ ಹಾಗೂ ಸರ್ವಿಸಿಂಗ್-ವಿಮೆಗೆ 85,000 ಸೇರಿ ಒಟ್ಟು 20.73 ಲಕ್ಷ ಆಗುತ್ತದೆ.

4. ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆಯೇ ಹೆಚ್ಚು. ಆದರೆ 5 ವರ್ಷಕ್ಕೆ ಚಾರ್ಜಿಂಗ್‌ಗೆ ಖರ್ಚಾಗುವುದು ಕೇವಲ 1.12 ಲಕ್ಷ ಮಾತ್ರ. ಸರ್ವಿಸಿಂಗ್ ಮತ್ತು ವಿಮೆಗೆ 1.50 ಲಕ್ಷ ಸೇರಿದರೆ ಒಟ್ಟು 22.12 ಲಕ್ಷ ತಗಲುತ್ತದೆ.

ಕೊನೆಯದಾಗಿ ನೀವು ಯಾವ ಕಾರು ತಗೋಬೇಕು?

ಪೆಟ್ರೋಲ್ ಕಾರು: ನೀವು ವರ್ಷಕ್ಕೆ 8,000 ಕಿ.ಮೀ ಗಿಂತ ಕಡಿಮೆ ಕಾರು ಓಡಿಸುವವರಾಗಿದ್ದರೆ ಪೆಟ್ರೋಲ್ ಕಾರೇ ಬೆಸ್ಟ್. ಆರಂಭಿಕ ಬೆಲೆ ಕಡಿಮೆ ಇರುವುದರಿಂದ ನಿಮಗೆ ಲಾಭವಾಗುತ್ತದೆ.

ಹೈಬ್ರಿಡ್ ಕಾರು: ನೀವು ಸಿಟಿ ಟ್ರಾಫಿಕ್‌ನಲ್ಲಿ ಹೆಚ್ಚಾಗಿ ಓಡಾಡುತ್ತೀರಿ, ಆದರೆ ಪದೇ ಪದೇ ಚಾರ್ಜಿಂಗ್ ಮಾಡುವ ತಲೆಬಿಸಿ ಬೇಡ ಎನ್ನುವುದಾದರೆ 'ಸ್ಟ್ರಾಂಗ್ ಹೈಬ್ರಿಡ್' ಕಾರು ಉತ್ತಮ ಆಯ್ಕೆ.

ಎಲೆಕ್ಟ್ರಿಕ್ ಕಾರು: ನೀವು ತಿಂಗಳಿಗೆ 1,200 ರಿಂದ 1,500 ಕಿ.ಮೀ ಗಿಂತ ಹೆಚ್ಚು ಓಡಾಡುತ್ತೀರಿ ಮತ್ತು ಮನೆಯಲ್ಲಿ ಚಾರ್ಜಿಂಗ್ ಪಾಯಿಂಟ್ ಹಾಕಿಸಿಕೊಳ್ಳಲು ಜಾಗವಿದೆ ಎಂದಾದರೆ ಇವಿ (EV) ಕಾರು ನಿಮಗೆ ಭರ್ಜರಿ ಹಣ ಉಳಿಸುತ್ತದೆ.

ಡೀಸೆಲ್ ಕಾರು: ನೀವು ಆಗಾಗ್ಗೆ ಲಾಂಗ್ ಡ್ರೈವ್ ಅಥವಾ ಹೈವೇಗಳಲ್ಲಿ ಹೆಚ್ಚು ಪ್ರಯಾಣಿಸುತ್ತೀರಿ ಎಂದಾದರೆ ಡೀಸೆಲ್ ಕಾರು ಇಂದಿಗೂ ಪ್ರಸ್ತುತವಾಗಿದೆ, (ಏಜೆನ್ಸೀಸ್​).