ನವದೆಹಲಿ: ತಕ್ಷಣ ಜಾರಿಗೆ ಬರುವಂತೆ ತಬ್ಲಿಘಿ ಜಮಾತ್ನ ಎಲ್ಲ ಚಟುವಟಿಕೆಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸುಪ್ರಿಂಕೋರ್ಟ್ಗೆ ಮಂಗಳವಾರ ಅರ್ಜಿಯೊಂದು ದಾಖಲಾಗಿದೆ.
ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರಿಗೆ ಕಳುಹಿಸಲಾಗಿದೆ. ಎಂಸಿಡಿ ಕಾಯ್ದೆ(ಮುನ್ಸಿಪಾಲ್ ಕಾರ್ಪೋರೇಷನ್ ಕಾಯ್ದೆ) ಅಡಿಯಲ್ಲಿ ನವದೆಹಲಿಯ ನಿಜಾಮುದ್ದಿನ್ನಲ್ಲಿರುವ ತಬ್ಲಿಘಿ ಜಮಾತ್ ಕಚೇರಿಯ ಕಟ್ಟಡವನ್ನು ಕೆಡವಲು ಸರ್ಕಾರಕ್ಕೆ ನಿರ್ದೇಶಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ಅಜಯ್ ಗೌತಮ್ ಎಂಬುವರು ದಾವೆ ಹೂಡಿದ್ದು, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ಮನವಿ ಮಾಡಿದ್ದಾರೆ. ತಬ್ಲಿಘಿ ಜಮಾತ್ ಹಿಂದೆ ಒಂದು ಕುತಂತ್ರವಿದೆ. ಕೊರನಾ ವೈರಸ್ ಅನ್ನು ತಬ್ಲಿಘಿ ಕಾರ್ಯಕರ್ತರ ಮೂಲಕ ಧಾರ್ಮಿಕ ಕಾರ್ಯಕ್ರಮ ಹೆಸರಿನಲ್ಲಿ ಭಾರತದಾದ್ಯಂತ ಹರಡಲು ಸಂಚು ರೂಪಿಸಲಾಗಿದೆ. ದೆಹಲಿ ಗಲಭೆಯಲ್ಲೂ ಇವರ ಕೈವಾಡ ಇದೆ ಎಂದು ಆರೋಪಿಸಿ, ಸೂಕ್ತ ತನಿಖೆಗೆ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.
ದೆಹಲಿ ಸರ್ಕಾರದ ಆದೇಶವಿದ್ದರೂ ಅದನ್ನು ಜಮಾತ್ ನಡೆಯದಂತೆ ತಡೆಯಲು ವಿಫಲವಾದ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ.
ಸದ್ಯ ಭಾರತದಲ್ಲಿರುವ 4 ಸಾವಿರಕ್ಕೂ ಹೆಚ್ಚು ಕರೊನಾ ಸೋಂಕಿತ ಪ್ರಕರಣಗಳಲ್ಲಿ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳಿಗೆ ತಬ್ಲಿಘಿ ಜಮಾತ್ನ ನಂಟಿದೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಸಾಕಷ್ಟು ಆಕ್ರೋಶದ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್)