ನ್ಯೂಸ್

ಕೆಆರ್‌ಎಸ್ ಸುತ್ತಲಿನ ಗಣಿಗಾರಿಕೆ ನಿಷೇಧ ಪ್ರಶ್ನಿಸಿ ಅರ್ಜಿ ಸಲ್ಲಿಕೆ: ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು : ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್‌ಎಸ್) ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಆಣೆಕಟ್ಟೆಯ ಸುರಕ್ಷತೆ ವಿಚಾರವಾಗಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಕನಿಷ್ಠ ನಾಲ್ಕು ತಿಂಗಳು ಕಾಲಾವಕಾಶಬೇಕು ಎಂದು ರಾಜ್ಯ ಮಟ್ಟದ ಆಣೆಕಟ್ಟು ಸುರಕ್ಷತಾ ಸಮಿತಿ ಹೈಕೋರ್ಟ್ ಗೆ ಮನವಿ ಮಾಡಿದೆ.

ಕೆಆರ್‌ಎಸ್ ಗಣಿ ಸುತ್ತಮುತ್ತಲ ಎಲ್ಲ ರೀತಿಯ ಗಣಿಗಾರಿಕೆಗಳನ್ನು ನಿಷೇಧ ಹೇರಿದ್ದ ಆದೇಶವನ್ನು ಹಾಗೂ ಸಿಮೀತ ಗಣಿ ಚಟುವಟಿಕೆಗಳಿಗೆ ಷರತ್ತುಗಳನ್ನು ವಿಧಿಸಿ ಮಂಡ್ಯ ಜಿಲ್ಲಾಧಿಕಾರಿ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್. ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲ ಎಸ್.ಎಸ್. ಮಹೀಂದ್ರ ವಾದ ಮಂಡಿಸಿ, ಕೆಆರ್‌ಎಸ್ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ವಿಚಾರವಾಗಿ ಹಾಗೂ ‘ಪ್ರಾಯೋಗಿಕ ಸ್ಫೋಟ’ (ಟ್ರಯಲ್ ಬ್ಲಾಸ್ಟ್) ವಿಧಾನದ ಮೂಲಕ ಪರಿಶೀಲಿಸುವ ಬದಲು ರಾಜ್ಯ ಆಣೆಕಟ್ಟು ಸುರಕ್ಷತಾ ಸಮಿತಿಯು ‘ಮ್ಯಾಥಮ್ಯಾಟಿಕಲ್ ಮೊಡಾಲಿಟಿ ಆ್ಯಂಡ್ ಪ್ರಾಪರ್ ವ್ಯಾಲಿಡೇಷನ್’ ವಿಧಾನದ ಮೂಲಕ ವೈಜ್ಞಾನಿಕವಾಗಿ ಸಮಗ್ರ ವಿಶ್ಲೇಷಣೆ ಮಾಡುತ್ತಿದೆ. ಇದು ಪೂರ್ಣಗೊಳಿಸಲು ಸಾಕಷ್ಟು ಸಮಯ ಬೇಕು ಆದ್ದರಿಂದ ಕನಿಷ್ಠ ನಾಲ್ಕು ತಿಂಗಳು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು

ಅದನ್ನು ಪರಿಗಣಿಸಿದ ನ್ಯಾಯಪೀಠ, ರಾಜ್ಯ ಆಣೆಕಟ್ಟು ಸುರಕ್ಷತಾ ಸಮಿತಿಗೆ ನಾಲ್ಕು ವಾರ ಸಮಯ ಕೊಟ್ಟು ವಿಚಾರಣೆಯನ್ನು ಅ. 14ಕ್ಕೆ ಮುಂದೂಡಿತು.

ಇದೇ ವೇಳೆ ಕೆಆರ್‌ಎಸ್ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಗಣಿ ಚಟುವಟಿಕೆಗಳನ್ನು ನಿಷೇಧಿಸಿ ಹೊರಡಿಸಲಾದ ಆದೇಶ ಮಾರ್ಪಾಡು ಮಾಡಬೇಕು, ಗಣಿ ಚಟುವಟಿಕೆ ನಿಷೇಧಿಸಿ ಹೊರಡಿಸಿದ ಆದೇಶದಲ್ಲಿ ಸಮಿತಿಯ ವರದಿ ಬರುವವರೆಗೆ ಪರಿವರ್ತಿತ ಜಮೀನಿನಲ್ಲಿ ಗಣಿ ಉದ್ದೇಶಿತ ಬಳಕೆಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ವಿಧಿಸಿದ್ದ ಷರತ್ತು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಹಲವು ಮಧ್ಯಂತರ ಅರ್ಜಿಗಳನ್ನು ಇತ್ಯರ್ಥಪಡಿಸಿದ ನ್ಯಾಯಪೀಠ, ಎಲ್ಲ ಮಧ್ಯಂತರ ಅರ್ಜಿದಾರರು ರಾಜ್ಯ ಆಣೆಕಟ್ಟು ಸುರಕ್ಷತಾ ಸಮಿತಿ ಮುಂದೆ ಮನವಿ ಸಲ್ಲಿಸಬಹುದು ಎಂದು ಹೇಳಿದೆ.