ನ್ಯೂಸ್

ನೌಕರರ ನಿಯೋಜನೆ ಪ್ರಶ್ನಿಸಿದ್ದ ಅರ್ಜಿ ವಜಾ: ಕಂದಾಯ ಇಲಾಖೆ ನಡೆ ಆಕ್ಷೇಪಿಸಿ ಪಿಐಎಲ್

 ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಹಲವು ಗ್ರಾಮ ಪಂಚಾಯತ್‌ಗಳಲ್ಲಿ ಕಂದಾಯ ಇಲಾಖೆಯ ನೌಕರರನ್ನು ಅನ್ಯ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದ್ದು, ಇದರಿಂದಾಗಿ ಆಡಳಿತ ಸಮರ್ಪವಾಗಿ ಕಾರ್ಯಚರಿಸುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ನಾಗರಾಜ್ ಕೃಷ್ಣ. ನಾಯ್ಕ ಹಾಗೂ ಮತ್ತಿತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್. ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ. ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರವೂ ಗ್ರಾಮಲೆಕ್ಕಿಗರನ್ನು ಗ್ರಾಮಪಂಚಾಯತ್ ಹೊರತಾಗಿ ಬೇರೆಡೆ ಕಾರ್ಯನಿರ್ವಹಿಸಲು ನಿಯೋಜನೆ ಮಾಡುವಂತಿಲ್ಲ ಎಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗೆ ಹಾಗೂ ತಾಲೂಕಿನ ಎಲ್ಲ ತಹಶೀಲ್ದಾರರಿಗೆ ಸೂಚಿಸಿ 2013 ರ ಅ. 29 ರಂದು ಹಾಗೂ 2017 ರ ಅ.30 ರಂದು ಸುತ್ತೋಲೆ ಹೊರಡಿಸಿತ್ತು. ಆದರೆ ಉತ್ತರ ಕನ್ನಡ ಜಿಲ್ಲೆಯ ಹಲವು ಗ್ರಾಮ ಪಂಚಾಯತ್ ಗಳಲ್ಲಿ ಕಂದಾಯ ಇಲಾಖೆಯ ನೌಕರರನ್ನು ಅನ್ಯ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದ್ದು, ಇದರಿಂದಾಗಿ ಗ್ರಾಮ ಪಂಚಾತ್ ಕಛೇರಿ ಗಳಲ್ಲಿ ಜನನ - ಮರಣ ಪ್ರಮಾಣ ಪತ್ರ, ಇ- ಖಾತೆ ಪತ್ರ, ಕಂದಾಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಸೇವೆಗಳನ್ನು ಸರಿಯಾದ ಸಮಯಕ್ಕೆ ಒದಗಿಸದೆ ವಿಲವಾಗಿದೆ. ಅಧಿಕಾರಿಗಳು ಈ ರೀತಿ ವಿಳಂಬ ಪ್ರವೃತ್ತಿ ಪ್ರದರ್ಶಿಸುತ್ತಿರುವುದರಿಂದ ಸಾರ್ವಜನಿಕರು ಅನೇಕ ರೀತಿಯಲ್ಲಿ ಸಂಕಷ್ಟ ಎದುರಿಸಬೇಕಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಜತೆಗೆ ಕೆಲವು ಗ್ರಾಮ ಅಧಿಕಾರಿಗಳನ್ನು ಮತ್ತು ಗ್ರಾಮ ಲೆಕ್ಕಿಗರನ್ನು ತಹಶೀಲ್ದಾರ್ ಕಛೇರಿಗೆ ಕಾರ್ಯನಿರ್ವಹಿಸುವಂತೆ ನಿಯೋಜಿಸಲಾಗಿದೆ ಇದರಿಂದಾಗಿ ಆಡಳಿತಾಂಗ ವ್ಯವಸ್ಥೆ ವಿಳಂಬಗತಿಯಲ್ಲಿ ಸಾಗುತ್ತಿದೆ. ಈ ಬಗ್ಗೆ ಕಂದಾಯ ಇಲಾಖೆಯ ಹಾಗೂ ಕಂದಾಯ ಸಚಿವರ ಗಮನಕ್ಕೂ ಹಲವು ಬಾರಿ ತರಲಾಗಿದೆ ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಈ ರೀತಿಯಲ್ಲಿ ಕಾನೂನು ಬಾಹಿರವಾಗಿ ನಡೆದುಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಪೀಠ ಈ ರೀತಿಯಲ್ಲಿ ಸುತ್ತೋಲೆಯನ್ನು ಜಾರಿಗೊಳಿಸಿಲ್ಲ ಎನ್ನುವುದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಶ್ನಿಸಲಾಗುವುದಿಲ್ಲ, ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.