ನ್ಯೂಸ್

ನಿಮ್ಮ ಮನರಂಜನೆಗಾಗಿ Bigg BOss ಮನೇಲಿ ಕತ್ತೆ ಬಳಸುತ್ತೀರಾ? ಸಲ್ಮಾನ್ ಖಾನ್ ಶೋ ವಿರುದ್ಧ ‘PETA’ ಆಕ್ರೋಶ

ಮುಂಬೈ:  ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ( Bigg Boss ) ಕನ್ನಡ ಸೀಸನ್ 11 ವಾರದ ಹಿಂದೆ ಶುರುವಾಗಿದೆ. ಇದು ರೋಚಕವೂ ಆಗಿದೆ. ಓರ್ವ ಸ್ಪರ್ಧಿ ಕೂಡಾ  ಮನೆಯಿಂದ ಹೊರ ಬಂದಿದ್ದಾರೆ. ಕನ್ನಡ ಸೇರಿದಂತೆ, ತೆಲಗು, ತಮಿಳು, ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್ ( Bigg Boss 18 )​​ ಎಲ್ಲಾ ಭಾಷೆಯಲ್ಲೂ ವಿಶೇಷವಾಗಿ ಜನಮನ್ನಣೆ ಪಡೆದಿರುವ ಕಾರ್ಯಕ್ರಮವಾಗಿ ಹೊರಹೊಮ್ಮುತ್ತಿದೆ.

ಖ್ಯಾತ ಸೆಲೆಬ್ರಿಟಿಗಳು, ಸೋಷಿಯಲ್ ಮೀಡಿಯಾ ಪ್ರಭಾವಿಗಳು ಮತ್ತು ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು 'ಬಿಗ್ ಬಾಸ್' ನಲ್ಲಿ ಸ್ಪರ್ಧಿಗಳಾಗಿ ಬರುತ್ತಾರೆ. ಕಾರ್ಯಕ್ರಮದ ಯಶಸ್ಸಿಗೆ ಮನೆಮಂದಿಯ ಆಯ್ಕೆ ಬಹುಮುಖ್ಯ. ಬಿಗ್ ಬಾಸ್ ಆಯೋಜಕರು ಇದಕ್ಕಾಗಿ ಸಾಕಷ್ಟು ಕಾಳಜಿ ವಹಿಸುತ್ತಾರೆ. ಆದರೆ ಈ ಬಾರಿ ಹಿಂದಿ ಬಿಗ್ ಬಾಸ್ ಮನೆಯೊಳಗೆ ಕತ್ತೆಯನ್ನೂ ( donkey) ಕರೆದುಕೊಂಡು ಹೋಗಲಾಗಿದೆ. ಈ ಕುರಿತಾಗಿ ವಿರೋಧ ವ್ಯಕ್ತವಾಗುತ್ತಿದೆ. 

ಈ ಬಾರಿ ಹಿಂದಿ ಬಿಗ್ ಬಾಸ್ ಮನೆಯೊಳಗೆ ಕತ್ತೆಯನ್ನೂ ಕರೆದುಕೊಂಡು ಹೋಗಲಾಗಿದೆ. ಇದನ್ನು ಸಹ ಸ್ಪರ್ಧಿ ಎಂದು ಪರಿಗಣಿಸಲಾಗುತ್ತದೆ. ಈ ಬಗ್ಗೆ ಪ್ರಾಣಿ ಹಕ್ಕುಗಳ ರಕ್ಷಣಾ ವೇದಿಕೆ ‘PETA’ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇಂತಹ ರಿಯಾಲಿಟಿ ಶೋನಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳುವುದು ಅತ್ಯಂತ ಅಪರಾಧ ಎಂದು PETA ಸಂಘಟಕರಿಗೆ ಪತ್ರ ಬರೆದಿದೆ.

ಬಿಗ್ ಬಾಸ್ ಮನೆಗೆ ಕತ್ತೆ ತಂದಿರುವುದಕ್ಕೆ ಪ್ರಾಣಿ ಪ್ರಿಯರಿಂದ ಆಕ್ಷೇಪ, ದೂರುಗಳು ಬರುತ್ತಿವೆ. ನಾವು ಇವುಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿದ್ದೇವೆ. ಯಾವುದೇ ಸಂದರ್ಭದಲ್ಲಿ ಅಂತಹ ವಿಷಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ದಯವಿಟ್ಟು ಪ್ರಾಣಿಗಳನ್ನು ಬಿಗ್ ಬಾಸ್ ನಿಂದ ದೂರವಿಡಿ. ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ, ಬಿಗ್ ಬಾಸ್ ನಿರೂಪಕರಾಗಿ ಮಾದರಿಯಾಗಿ, ನೀವು (ಸಲ್ಮಾನ್ ಖಾನ್) Salman Khan ಎಲ್ಲರಿಗೂ ಮಾದರಿ. ಮನರಂಜನೆಗಾಗಿ ಪ್ರಾಣಿಗಳಿಗೆ ಹಾನಿ ಮಾಡಬಾರದು ಎಂದು ಚಾನೆಲ್ ಆಡಳಿತ ಮಂಡಳಿಗೆ ತಿಳಿಸಿ' ಎಂದು ಪೇಟಾ ಪ್ರತಿನಿಧಿಗಳು ರಿಯಾಲಿಟಿ ಶೋ ಆಯೋಜಕರಿಗೆ ಪತ್ರ ಬರೆದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಕತ್ತೆಯ ಹೆಸರು ಮ್ಯಾಕ್ಸ್. ಈ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಬಂದಿದ್ದ ಜನಪ್ರಿಯ ವಕೀಲ ಗುಣರತ್ನ ಸದಾವರ್ತೆ ತಮ್ಮ ಜೊತೆಗೆ ಕತ್ತೆಯನ್ನೂ ತಂದಿದ್ದರು.

ಈ ಹಿಂದೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ‘777 ಚಾರ್ಲಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶ್ವಾನ ಕಾಣಿಸಿಕೊಳ್ಳಲಿದೆ ಎಂಬ ಸುದ್ದಿ ಹರಡಿತ್ತು. ಈ ಬಗ್ಗೆ ಅಧಿಕೃತ ಹೇಳಿಕೆ ಕೂಡ ಬಿಡುಗಡೆಯಾಗಿತ್ತು. ಆದರೆ ಕಾರಣಾಂತರಗಳಿಂದ ನಾಯಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿರಲಿಲ್ಲ. ಇದೀಗ ಹಿಂದಿ ಬಿಗ್​ಬಾಸ್​​ ಮನೆಗೆ ಕತ್ತೆ ಎಂಟ್ರಿ ಕೊಟ್ಟಿದ್ದು  ಸಖತ್​​ ಸುದ್ದಿಯಲ್ಲಿದೆ.