ನ್ಯೂಸ್

ಮನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಿಂದ ಮಾಲೀಕನ ಜೀವ ಉಳಿಸಿದ ಗಿಳಿ..!

ಬ್ರಿಸ್ಬೇನ್​​: ಚಾಣಾಕ್ಷ ಗಿಳಿಯೊಂದು ಮನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಿಂದ ತನ್ನ ಮಾಲೀಕನ ಪ್ರಾಣ ಉಳಿಸಿರುವ ಮನಮುಟ್ಟುವ ಘಟನೆ ದೂರದ ಆಸ್ಟ್ರೇಲಿಯಾದ ಬ್ರಿಸ್ಬೇನ್​ನಲ್ಲಿ ನಡೆದಿದೆ.

ಆಂಟನ್ ನುಯೇನ್ ಬಚಾವ್​ ಆದ ಮಾಲೀಕ. ಬ್ರಿಸ್ಬೇನ್​ನ ಕಾಂಗರೋ ನಗರದ ಸ್ಯಾಲ್ಸ್ಟೋನ್​ ಸ್ಟ್ರೀಟ್​ನಲ್ಲಿರುವ ಮನೆಗೆ ಇದ್ದಕ್ಕಿಂದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಅದನ್ನು ಗಮಿಸಿದ ಗಿಳಿ ಬೆಂಕಿ ಕೆನ್ನಾಲಿಗೆ ಹರಡುತ್ತಿದ್ದಂತೆ ಪದೇಪದೆ ಮಾಲೀಕನ ಹೆಸರನ್ನು ಕೂಗಿ ಎಚ್ಚರಿಸಿದಾಗ ಆಂಟನ್​ ಅವಘಡದಿಂದ ಬಚಾವ್​ ಆಗಿದ್ದಾರೆ.

ನಾನು ಮಲಗಿದ್ದೆ. ನಿರಂತರವಾಗಿ ಎರಿಕ್​ (ಗಿಳಿಯ ಹೆಸರು) ಕೂಗುವುದನ್ನು ಕೇಳಿ ಎಚ್ಚರವಾಯಿತು. ಬಳಿಕ ಹೊಗೆಯ ವಾಸನೆ ಮೂಗಿಗೆ ಬಡಿಯಿತು. ತಕ್ಷಣ ಎರಿಕ್​ ಬಾಚಿಕೊಂಡು ಬಾಗಿಲು ತೆರೆದೆ. ಮನೆಯ ಹಿಂಭಾಗದಲ್ಲಿ ಬೆಂಕಿಯ ಜ್ವಾಲೆಯನ್ನು ನೋಡಿದೆ. ತಕ್ಷಣ ನನ್ನ ಬ್ಯಾಗ್​ ಎತ್ತಿಕೊಂಡ ಅಲ್ಲಿಂದ ಹೊರಗಡೆ ಬಂದೆ ಎಂದು ಆಂಟನ್​ ಹೇಳಿದ್ದಾರೆ.

ಇದಾದ ಬಳಿಕ ಆಂಟನ್​ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಗಿಳಿಯ ಸಾಹಗಾಥೆ ಕೇಳಿ ಅಚ್ಚರಿಗೊಂಡರು. ಅಗ್ನಿಶಾಮಕ ಅಧಿಕಾರಿ ಕ್ಯಾಮ್​ ಥಾಮಸ್ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)