ನ್ಯೂಸ್

ಪಿತೃಗಳನ್ನು ತೃಪ್ತಿಪಡಿಸುವ ಪರ್ವಕಾಲ ಪಿತೃಪಕ್ಷ

Webdesk - Mallikarjun K R

| ರಾಜಗುರು ಬಿ.ಎಸ್.ದ್ವಾರಕನಾಥ

 ಮನುಷ್ಯ ಈ ಭೂಮಿಗೆ ಬರಲು ಅಲೌಕಿಕ ವಾಗಿ ಭಗವಂತ ಕಾರಣನಾದರೂ, ಲೌಕಿಕವಾಗಿ ಅವರವರ ಮಾತಾಪಿತೃಗಳು ಕಾರಣ. ಆದ್ದರಿಂದ ಅವರ ಋಣವನ್ನು ಜನ್ಮದಾರಭ್ಯ ಪೂಜಿಸಿದರೂ ತೀರಿಸು ವುದು ಅಸಾಧ್ಯ. ದೇವರನ್ನು ನಿತ್ಯವೂ ಪೂಜಿಸುವಂತೆ ಅಗಲಿರುವ ತಂದೆ-ತಾಯಿಯರನ್ನು ನಿತ್ಯವೂ ಪೂಜಿಸುವುದು ಎಲ್ಲರಿಗೂ ಸಾಧ್ಯವಾಗದಿರಬಹುದೆಂಬ ಕಾರಣಕ್ಕೆ ನಮ್ಮ ಹಿರಿಯರು, ವರ್ಷ ಋತುವಿನ ಬಾದ್ರಪದ ಮಾಸದ ಪಾಡ್ಯದಿಂದ ಮಹಾಲಯ ಅಮಾವಾಸ್ಯೆವರೆಗೆ ಪಿತೃಗಳನ್ನು ಪೂಜಿಸಲು ಸಮಯ ನಿಗದಿ ಮಾಡಿದ್ದಾರೆ. ಈ 15 ದಿನಗಳ ಕಾಲವೂ ಪಿತೃಪೂಜೆಗೆ ಶ್ರೇಷ್ಠವಾಗಿದ್ದು, ಕೊನೇ ಪಕ್ಷ ಈ ಅವಧಿಯ ಒಂದು ದಿನವಾದರೂ ಪಿತೃಗಳಿಗೆ ಪೂಜೆ ಸಲ್ಲಿಸಿ ತರ್ಪಣ ನೀಡಿ, ನೈವೇದ್ಯ ಅರ್ಪಿಸಿ ಭಗವಂತನ ಸಾನ್ನಿಧ್ಯದಲ್ಲಿ ಶಾಶ್ವತ ಸ್ಥಾನವನ್ನು ಒದಗಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬೇಕೆಂಬ ನಿಯಮವಿದೆ.

ಮನುಷ್ಯನ ಬಾಲ್ಯದಿಂದ ಅಂತ್ಯೇಷ್ಠಿವರೆಗೂ ಷೋಡಷ ಕರ್ಮಗಳನ್ನು ಶಾಸ್ತ್ರಕಾರರು ಬರೆದಿದ್ದಾರೆ. ಜನನ-ಮರಣಗಳು ಯಾರನ್ನೂ ಬಿಟ್ಟಿಲ್ಲ. ಭೌತಿಕವಾಗಿ ಇರುವಷ್ಟು ದಿವಸ ಎಲ್ಲ ರೀತಿಯ ಸೇವೆ ಮಾಡಿ, ಮರಣಾನಂತರವೂ ದೇವತಾ ಸಾನ್ನಿಧ್ಯ ಪ್ರಾಪ್ತಿಗಾಗಿ ಗಂಡು ಮಕ್ಕಳು ಪಿತೃಪಕ್ಷದಲ್ಲಿ ಪಿತೃಪೂಜೆಯನ್ನು ಮಾಡಲೇಬೇಕು.

ಅವರವರ ಸಂಪ್ರದಾಯದಂತೆ ಪೂಜಾ ಕ್ರಮ: ಪಿತೃಪಕ್ಷ ಕರ್ವಂಗದಲ್ಲಿ ತಿಳಿಸಿರುವಂತೆ, ಪಿತೃಪಕ್ಷದ ಯಾವುದಾದರೂ ಒಂದು ದಿನ ಅವರವರ ಮನೆಯಲ್ಲಿ ನಡೆದುಕೊಂಡು ಬಂದಿ ರುವ ಸಂಪ್ರದಾಯದಂತೆ ಆಚರಣೆಗಳನ್ನು ಮಾಡಬೇಕು. ಪಿತೃತರ್ಪಣ, ಜಲತರ್ಪಣ, ಋಷಿತರ್ಪಣಾದಿಗಳನ್ನು ನೀಡಿ ಬಂಧು-ಮಿತ್ರರಿಗೆ ಸುಗ್ರಾಸ ಭೋಜನವನ್ನು ಮಾಡಿಸಿ ಸಂತೃಪ್ತಿ ಪಡಿಸುವ ಮೂಲಕ ಪಿತೃಗಳಿಗೆ ದೈವ ಸಾನ್ನಿಧ್ಯವನ್ನು ದೊರಕಿಸಿ ಕೊಡಬೇಕಾಗಿರುವುದು ಮಕ್ಕಳ ಕರ್ತವ್ಯ. ತಂದೆಯ ಮೂರು ತಲೆಮಾರು, ತಾಯಿಯ ಮೂರು ತಲೆಮಾರಿನ ಹಿರಿಯರನ್ನು ಈ ಸಂದರ್ಭದಲ್ಲಿ ಪೂಜಿಸಬೇಕು. ‘ದೇವಪಿತೃ ಕಾರ್ಯಾಭ್ಯಾಂ ಸ್ವಾಧ್ಯಾಯ ಪ್ರವಚನೇಯಚ’ ಎಂಬ ಉಪ ನಿಷತ್ತಿನ ವಾಕ್ಯದಂತೆ; ಒಂದೊಮ್ಮೆ ದೇವತಾ ಪೂಜೆಯನ್ನು ಮಾಡದಿದ್ದರೂ ಕ್ಷಮೆ ಸಿಗಬಹುದು. ಆದರೆ ಪಿತೃಪಕ್ಷದಲ್ಲಿ ಪಿತೃಪೂಜೆ ಮಾಡದಿದ್ದರೆ ಕ್ಷಮೆ ಇಲ್ಲ ಎಂದು ಬರೆದಿದ್ದಾರೆ.

ಪಿತೃಕಾರ್ಯಕ್ಕೆ ಸಪ್ತ ಮೋಕ್ಷ ಕ್ಷೇತ್ರಗಳು: ಶಾಸ್ತ್ರಾಧಾರದಂತೆ ದೇವತೆಗಳು ಕಾಮ್ಯಬಲವನ್ನು ಕೊಟ್ಟರೆ, ಮನುಷ್ಯನ ವಂಶವೃಕ್ಷ ಬೆಳೆಯುವುದಕ್ಕೆ ಪಿತೃಗಳ ಕೃಪೆ ಕಡ್ಡಾಯವಾಗಿರಬೇಕು. ಆ ಕಾರಣಕ್ಕೆ ಅಯೋಧ್ಯಾ, ಮಥುರಾ, ಗಯಾ, ಕಾಶೀ, ಕಾಂಚಿ, ಆವಂತಿಕಾ (ಉಜ್ಜೈನಿ), ಪುರೀ, ದ್ವಾರವತೀ ಕ್ಷೇತ್ರಗಳನ್ನು ಸಪ್ತ ಮೋಕ್ಷಸ್ಥಳ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕ್ಷೇತ್ರಗಳು ಪಿತೃತರ್ಪಣಕ್ಕೆ ಸರ್ವಶ್ರೇಷ್ಠ. ಶ್ರೀರಾಮನು ಭಗವಂತನ ಅವತಾರವಾದರೂ ತನ್ನ ಜನ್ಮದಾತನಾದ ದಶರಥ ಮರಣವನ್ನಪ್ಪಿದ ಸುದ್ದಿ ತಿಳಿದು ವನವಾಸದಲ್ಲಿದ್ದರೂ ಗೆಡ್ಡೆಗೆಣಸುಗಳಿಂದ ಗೋಲಾಕಾರದ ಪಿಂಡಪ್ರದಾನ ಮಾಡಿ ತಿಲತರ್ಪಣ ನೀಡಿದ್ದಾನೆ. ಚೌತಿಯಂದುಪ್ರತಿಷ್ಠಾಪನೆಗೊಂಡ ಗಣಪತಿಯು 11ನೇ ದಿನಕ್ಕೆ ಭೂಲೋಕದಿಂದ ಕೈಲಾಸಕ್ಕೆ ಹೋಗಿ ಬಾದ್ರಪದ ಪೌರ್ಣಿಮೆಯಂದು ಮಾತಾ-ಪಿತೃ ಗಳನ್ನು ಪೂಜಿಸುತ್ತಾನೆ. ಮರುದಿನ ಅಂದರೆ ಪಾಡ್ಯದಿಂದ ಅಮಾವಾಸ್ಯೆವರೆಗೆ ಪಿತೃಪಕ್ಷದ ಪೂಜೆ ಆರಂಭವಾಗುತ್ತದೆ.

ಪಿತೃಪಕ್ಷದ ನಂತರ ನವರಾತ್ರಿ-ಮಾತೃಪಕ್ಷ: ಎಲ್ಲ ಧರ್ಮಗಳು ಜೀವಿತಾವಧಿಯವರೆಗಿನ ನಿಯಮಗಳನ್ನು ಹೇಳುತ್ತವೆ. ಆದರೆಹಿಂದು ಧರ್ಮ ಜೀವಿತಾವಧಿಯ ನಂತರದ ಮೋಕ್ಷದ ಬಗ್ಗೆಯೂ ಹೇಳುತ್ತದೆ. ಮಹಾಲಯ ಅಮಾವಾಸ್ಯೆಯ ನಂತರ ಆಶ್ವೀಜಮಾಸದೊಂದಿಗೆ ಶಕ್ತಿ ಆರಾಧನೆಗೆ ಮೀಸಲಾದ ನವರಾತ್ರಿ ಆರಂಭವಾಗುತ್ತದೆ. ನವರಾತ್ರಿಯನ್ನು ಮಾತೃಪಕ್ಷ ಎಂತಲೂ ಕರೆಯುತ್ತಾರೆ. ಪಿತೃಪಕ್ಷದ ಪೂಜೆಯನ್ನು ಮಾಡದೇ, ಮಾತೃಪಕ್ಷದಲ್ಲಿ ದೇವಿ ಆರಾಧನೆ ಮಾಡಿದರೆ ಅದು ಪರಿಪೂರ್ಣವಾಗುವುದಿಲ್ಲ ಎಂಬ ಮಾತಿದೆ. ಆದ್ದರಿಂದ ಪಿತೃಪೂಜೆಯನ್ನು ಎಲ್ಲರೂ ತಪ್ಪದೇ ಮಾಡಬೇಕು.

ಅ.2ಕ್ಕೆ ಮಹಾಲಯ ಅಮಾವಾಸ್ಯೆ: ಈ ಬಾರಿ ಬಾದ್ರಪದ ಪೌರ್ಣಿಮೆಯ (ಸೆ.18) ದಿವಸವೇ ಪಾಡ್ಯ ಆರಂಭವಾಗಿದ್ದು, ಇದು ಪಿತೃಪೂಜೆಗೆ ಬಹಳ ಶ್ರೇಷ್ಠ. ಸೆ.19ರಿಂದ ಆರಂಭವಾಗಿ ಅ.2ರ ವರೆಗೆ ಪಿತೃಪಕ್ಷವಿದೆ. ಅಮಾವಾಸ್ಯೆ ಬುಧವಾರ ಬಂದಿದ್ದು, ಕೆಲವರ ಮನೆಯಲ್ಲಿ ಬುಧವಾರ ಹಿರಿಯರಿಗೆ ಎಡೆ ಹಾಕುವುದಿಲ್ಲ ಎಂಬ ಮಾತಿದೆ. ಶಾಸ್ತ್ರದ ಪ್ರಕಾರ ಬುಧವಾರ ಎಡೆ ಹಾಕುವುದಕ್ಕೆ ನಿಷೇಧವಿಲ್ಲ. ಆದರೂ ನಿಮಗೆ ಗೊಂದಲವಿದ್ದರೆ ಪಿತೃಪಕ್ಷದ 15 ದಿವಸಗಳಲ್ಲಿ ನಿಮ್ಮ ಹಿರಿಯರು ನಿಧನರಾದ ವಾರ ಅಥವಾ ತಿಥಿಗನುಗುಣವಾಗಿ ಯಾವತ್ತಾದರೂ ಪಿತೃಪೂಜೆ ಮಾಡಬಹುದು. ದೃಗ್ಗಣಿತ ಪ್ರಕಾರ ಅ.1ರ ರಾತ್ರಿ 9.45ರವರೆಗೆ ಚತುರ್ದಶಿ ಇದ್ದು, ಇದನ್ನು ಘಾತಾ ಚತುರ್ದಶಿ ಎನ್ನುತ್ತಾರೆ. ಅಂದರೆ ಅಪಮೃತ್ಯುವಿನಿಂದ ಮರಣವನ್ನಪ್ಪಿದವರಿಗೆ ಶ್ರಾದ್ಧ ಮಾಡುವುದಕ್ಕೆ ಈ ದಿನ ಮೀಸಲಾಗಿರುವುದರಿಂದ ಅಮಾವಾಸ್ಯೆಯನ್ನು ಅ.2ಕ್ಕೆ ಆಚರಿಸಬೇಕು. ಕೆಲವು ಮನೆಗಳಲ್ಲಿ ಪಿತೃಪೂಜೆಗೆ ಮಾಂಸಾಹಾರವನ್ನು ಮಾಡುವ ಪದ್ದತಿಯಿದ್ದು, ಗಾಂಧಿ ಜಯಂತಿಯಂದು ಮಹಾಲಯ ಅಮಾವಾಸ್ಯೆ ಬಂದಿರುವುದರಿಂದ ಮಧ್ಯ-ಮಾಂಸ ಮಾರಾಟಕ್ಕೆ ನಿಷೇಧ ಇರುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು.