ನ್ಯೂಸ್

ಪೆರುವಾಯಿ ಗ್ರಾ.ಪಂ. ಮುಂದೆ ಪ್ರತಿಭಟನೆ

Mangaluru - Nishantha Narayana

ವಿಟ್ಲ: ಲಂಚ ಪಡೆಯುವ ಸಂದರ್ಭ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸ್ ಅವರನ್ನು ವಜಾಗೊಳಿಸುವಂತೆ ಮತ್ತು ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಿಂತ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಪೆರುವಾಯಿ ಗ್ರಾಮಸ್ಥರಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಭ್ರಷ್ಟಾಚಾರವನ್ನು ಯಾವ ರೀತಿ ನಡೆಸಬಹುದೆಂಬುದಕ್ಕೆ ತರಬೇತಿಯನ್ನು ಪೆರುವಾಯಿಯಲ್ಲಿ ಪಡೆದುಕೊಳ್ಳಬಹುದು ಎಂದರು.

ಜಾಗರಣ ವೇದಿಕೆಯ ಮುಂಖಡ ನರಸಿಂಹ ಮಾಣಿ ಮಾತನಾಡಿ, ಲಕ್ಷಾಂತರ ಅವ್ಯವಹಾರ ನಡೆಸಲು ಪಿಡಿಒ ರೂವಾರಿಯಾಗಿದ್ದು, ಬಂಟ್ವಾಳ ಇಒ ಅವರನ್ನು ಅಮಾನತು ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಹಾಕಿದ ಸಿಸಿ ಟಿವಿಗಳ ಸಂಪರ್ಕವನ್ನು ಅಧ್ಯಕ್ಷರ ಮೊಬೈಲ್‌ಗೆ ನೀಡಿದ್ದು, ತಕ್ಷಣ ಸ್ಥಗಿತ ಮಾಡಬೇಕು ಎಂದರು.

ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಮಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು. ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಆಗಮಿಸಿದರಾದರೂ ಅವರ ಮೇಲೆಯೇ ಆರೋಪ ಮಾಡಿ ಪ್ರತಿಭಟನೆ ನಡೆಸಿದ ಕಾರಣ ಮನವಿ ಸ್ವೀಕರಿಸಲು ನಿರಾಕರಿಸಿದರು. ಬಳಿಕ ಪಿಡಿಒ ದೀಪಕ್ ರಾಜ್ ಮನವಿ ಸ್ವೀಕರಿಸಿದರು.

ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಹರಿಪ್ರಸಾದ್ ಯಾದವ್, ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ವಿಶ್ವ ಹಿಂದು ಪರಿಷತ್ ಪ್ರಮುಖ್ ಅಶೋಕ್ ಮಾಣಿಲ, ಪ್ರಮುಖರಾದ ಗಣೇಶ್ ಭಟ್, ಅಜಿತ್ ಭಟ್, ಮನೀಷ್, ಗೋಪಾಲ ಶೆಟ್ಟಿ ಮತ್ತಿತರರಿದ್ದರು. ಜಯರಾಮ ಆಳ್ವ ಬದಿಯಾರು ಸ್ವಾಗತಿಸಿದರು. ಯತೀಶ್ ಪೆರುವಾಯಿ ಪ್ರಸ್ತಾವನೆಗೈದರು. ಮೋಕ್ಷಿತ್ ಪೆರುವಾಯಿ ವಂದಿಸಿದರು.