ಜನರು ವರ್ತರು ಪ್ರಕಾಶ್​ ಅವರನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿರುವುದು.  
ನ್ಯೂಸ್

ಮೈಮರೆಯದೆ ಮತದಾರರ ಮನವೊಲಿಸಿ; ಸಚಿವ ಡಾ.ಸುಧಾಕರ್​ ಕರೆ; ಹುಟ್ಟುಹಬ್ಬ ನೆಪದಲ್ಲಿ ವರ್ತೂರು ಬೃಹತ್​ ಸಮಾವೇಶ ;ಮಾದರಿ ಕ್ಷೇತ್ರದ ಭರವಸೆ

ಕೋಲಾರ: ಇಲ್ಲಿ ತನಕ ಬೇರೆಯವರ ಹವಾ, ಇನ್ನೇನಿದ್ದರೂ ವರ್ತೂರು ಪ್ರಕಾಶ್​ ಹವಾ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹೇಳಿದರು.

ನಗರದ ಸಿ.ಬೈರೇಗೌಡ ನಗರದಲ್ಲಿ ಮಂಗಳವಾರ ಮಾಜಿ ಸಚಿವ ವರ್ತೂರು ಆರ್​. ಪ್ರಕಾಶ್​ 56ನೇ ಹುಟ್ಟುಹಬ್ಬ ಮತ್ತು ಬಿಜೆಪಿ ಕಾರ್ಯಕರ್ತರ ಬೃಹತ್​ ಸಮಾವೇಶದಲ್ಲಿ ಕೇಕ್​ ಕತ್ತರಿಸಿ ಶುಭಹಾರೈಸಿದ ನಂತರ ಮಾತನಾಡಿ, ಸಾಗರೋಪಾದಿಯಲ್ಲಿ ಅಭಿಮಾನಿಗಳು ಬಂದಿರುವುದು ನೋಡಿದರೆ 15 ದಿನದ ಮುಂಚೆಯೇ ಹೊಸವರ್ಷ ಆಚರಣೆ ಮಾಡುತ್ತಿದ್ದೇವೇನೋ ಎಂದು ಭಾಸವಾಗುತ್ತಿದೆ. ನೂರಕ್ಕೆ ನೂರು ವರ್ತೂರು ಪ್ರಕಾಶ್​ ಶಾಸಕರಾಗುವ ಮುನ್ಸೂಚನೆ ಇದಾಗಿದೆ. ರಾಜಕಾರಣದಲ್ಲಿ ನನ್ನ ಮಾತು ಎಂದಿಗೂ ಸುಳ್ಳಾಗಿಲ್ಲ ಎಂದು ಭವಿಷ್ಯ ನುಡಿದರು.

ಕೃಷ್ಣನಿಗೆ ಆತ್ಮೀಯರಿದ್ದಂತೆ ವರ್ತೂರ್​ಗೆ ಬೆಂಬಲಿಗರ ಪಡೆ ಇದ್ದು, ನನಗೇ ಅಸೂಯೆ ಮೂಡುವಂತೆ ಮಾಡಿದೆ. ಅವರ ಕಷ್ಟ ಕಾಲದಲ್ಲೂ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದೀರಿ. ಕಾರ್ಯಕರ್ತರು 3 ತಿಂಗಳು ಮೈಮರೆಯದೆ ಮತದಾರರ ಮನವೊಲಿಸುವ ಕೆಲಸ ಮಾಡಬೇಕು. ಮುಂದೆ ಎಲ್ಲರೂ ಸೇರಿ ಸುವರ್ಣ ಕೋಲಾರ ಮಾಡೋಣ ಎಂದರು.

ವೇದಿಕೆಯಲ್ಲಿ ಸಚಿವರಾದ ಡಾ.ಕೆ.ಸುಧಾಕರ್​, ಮುನಿರತ್ನ, ಮಾಜಿ ಶಾಸಕರಾದ ಮಂಜುನಾಥಗೌಡ, ವೈ.ಸಂಪಂಗಿ ಹಾಗೂ ಜನರತ್ತ ಕೈಬಿಸುತ್ತಿರುವ ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​.

ಈ ಯುಗಾದಿಗೆ ಹೊಸ ಶಾಸಕರು: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ, ಸಮಾವೇಶ ನೋಡುತ್ತಿದ್ದರೆ ಯುಗಾದಿಗೆ ಹೊಸ ಶಾಸಕರನ್ನು ನೀವು ನೀಡುತ್ತೀರಿ ಎಂದೆನಿಸುತ್ತಿದೆ. ಆ ಶಾಸಕರು ಮತ್ತಿನ್ನಾರೂ ಅಲ್ಲ, ಅದು ವರ್ತೂರ್​ ಪ್ರಕಾಶ್​ ಎಂದರು.

ಸೂರ್ಯ, ಚಂದ್ರರಷ್ಟೇ ವರ್ತೂರು ಪ್ರಕಾಶ್​ ಗೆಲ್ಲುವುದು ಸತ್ಯ. ಮಾನವೀಯತೆ, ಬಡವರು, ಅಭಿವೃದ್ಧಿಪರ ಸದಾ ಕಳಕಳಿ ಇರುವ ವ್ಯಕ್ತಿ ನಿಮಗೆ ಸಿಕ್ಕಿದ್ದಾರೆ. ಕೋಲಾರವನ್ನು ಮುಂದಿನ ಚುನಾವಣೆ ನಂತರ ಮಾದರಿ ಕ್ಷೇತ್ರವನ್ನಾಗಿಸಲು ಅವರ ಹೆಗಲಿಗೆ ಹೆಗಲು ಕೊಡುತ್ತೇವೆ. ವರ್ತೂರು ಪ್ರಕಾಶ್​ ಅವರಿಂದ ಬಿಜೆಪಿ ಇಷ್ಟು ದೊಡ್ಡಮಟ್ಟದಲ್ಲಿ ಹೆಸರು ಮಾಡುವಂತಾಗಿದೆ. ಎಲ್ಲಿ ನೋಡಿದರೂ ಕೇಸರಿಮಯವಾಗಿದೆ. ಅವರ ಮುಂದಿನ ಭವಿಷ್ಯ ಉತ್ತಮಪಡಿಸುವುದು ಡಾ.ಕೆ.ಸುಧಾಕರ್​ ಮತ್ತು ನನ್ನ ಜವಾಬ್ದಾರಿಯಾಗಿದೆ ಎಂದರು.

ಜೀವಮಾನ ಪರ್ಯಂತ ಬಿಜೆಪಿಯಲ್ಲಿರುವೆ: ಮಾಜಿ ಸಚಿವ ವರ್ತೂರು ಪ್ರಕಾಶ್​ ಮಾತನಾಡಿ, ಮುಂದಿನ 30 ದಿನ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಸಮಸ್ಯೆ ಆಲಿಸುತ್ತೇನೆ. ಶಾಸಕರು ಮೂಲಸೌಲಭ್ಯ ಒದಗಿಸಿಲ್ಲ. ಶುದ್ಧ ನೀರು, ಹೈಮಾಸ್ಟ್​ ದೀಪಗಳ ಅಳವಡಿಕೆಗೆ ಕ್ರಮ ತೆಗೆದುಕೊಳ್ಳುತ್ತೇನೆ. ನಿಮ್ಮ ಅಭಿಮಾನ ಕಂಡು ಹೃದಯತುಂಬಿ ಬಂದಿದೆ. ಜೀವಮಾನ ಪರ್ಯಂತ ಇನ್ನು ಬಿಜೆಪಿಯಲ್ಲೇ ಇರುತ್ತೇನೆ ಎಂದರು.

ಫ್ಲೆಕ್ಸ್​ ಕಿತ್ತುಹಾಕಿದ ಕಿಡಿಗೇಡಿಗಳು: ಬಿಜೆಪಿ ಮುಖಂಡ ಬೆಗ್ಲಿ ಸೂರ್ಯಪ್ರಕಾಶ್​ ಮಾತನಾಡಿ, ನಗರದ 12 ವಾರ್ಡ್​ಗಳಲ್ಲಿ ಫ್ಲೆಕ್ಸ್​ಗಳನ್ನು ಸೋಮವಾರ ರಾತ್ರಿ ಕಿತ್ತುಹಾಕಲಾಗಿದೆ. ಜೆಡಿಎಸ್​ ಪಂಚರತ್ನ ಯಾತ್ರೆ ಫ್ಲೆಕ್ಸ್​ಗಳನ್ನು ಎಲ್ಲೆಡೆ ಹಾಕಿದ್ದರೂ ನಮ್ಮ ಕಾರ್ಯಕರ್ತರು ಇಂತಹ ಕೃತ್ಯವೆಸಗಿರಲಿಲ್ಲ. ಇಂತಹ ಕೃತ್ಯವೆಸಗಿದ ಕಿಡಿಗೇಡಿಗಳನ್ನು ಸಹಿಸಿಕೊಳ್ಳುವ ಮಾತೇ ಇಲ್ಲ. ಕಳೆದ ಬಾರಿ ವರ್ತೂರು ಪ್ರಕಾಶ್​ ಅವರ ತಾಯಿ, ಮಡದಿ ಮೃತಪಟ್ಟಿದ್ದರೂ 40 ಸಾವಿರ ಮತ ಪಡೆದಿದ್ದೆವು. ಈ ಬಾರಿ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದರು.

ಕೋಲಾರಮ್ಮ ದೇಗುಲದಲ್ಲಿ ಪೂಜೆ: ಸಮಾವೇಶಕ್ಕೂ ಮುನ್ನ ವರ್ತೂರು ಆರ್​.ಪ್ರಕಾಶ್​ ಬಸ್​ ನಿಲ್ದಾಣ ಬಳಿಯ ಆಂಜನೇಯಸ್ವಾಮಿ, ಕೋಲಾರಮ್ಮ ದೇವಾಲಯಗಳಿಗೆ ಸಚಿವರಾದ ಡಾ.ಕೆ.ಸುಧಾಕರ್​, ಮುನಿರತ್ನ ಜತೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಸಂಸದ ಎಸ್​.ಮುನಿಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​ ಸಹ ಅಂತರ ಕಾಯ್ದುಕೊಂಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಬಿರಿಯಾನಿಗೆ ನೂಕು ನುಗ್ಗಲು

ಬಿರಿಯಾನಿಗಾಗಿ ನೂಕು ನುಗ್ಗಲು

ಸಮಾವೇಶದಲ್ಲಿ 10 ಸಾವಿರ ಮಂದಿ ಪಾಲ್ಗೊಂಡಿದ್ದು, 5 ಸಾವಿರ ಕೆಜಿ ಚಿಕನ್​ ಬಿರಿಯಾನಿ ತಯಾರಿಸಲಾಗಿತ್ತು. ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಮುಗಿಬಿದ್ದು, ಬಾಡೂಟದ ರುಚಿ ಸವಿದರು. ಆದರೆ ಬಿರಿಯಾನಿಗೆ ನೂಕುನುಗ್ಗಲು ಉಂಟಾಗಿ ಕೆಲವರು ಪಾತ್ರೆಗೆ ಕೈ ಹಾಕಿದರು. ಇನ್ನೂ ಕೆಲವರು ಗೋಣಿ ಚೀಲ, ಕೇಸರಿ ಶಾಲುಗಳಲ್ಲಿ ತುಂಬಿಸಿಕೊಂಡು ತೆರಳಿದರು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದರಿಂದ ವೃದ್ಧನೊಬ್ಬನ ತಲೆಗೆ ಗಾಯವಾಯಿತು. ಸಮಾವೇಶ ಮಧ್ಯಾಹ್ನ 2ಕ್ಕೆ ಮುಗಿದರೂ ಬಾಡೂಟದ ರುಚಿಯನ್ನು ಸಂಜೆ 5ಗಂಟೆ ತನಕ ಜನ ನೋಡಿದರು.