ಶಿವಮೊಗ್ಗ: ಮುಂಗಾರು ಹಂಗಾಮು ಆರಂಭವಾಗುತ್ತಿದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿ ಜನರ ನಡುವೆಯಿದ್ದು ಕೆಲಸ ಮಾಡಬೇಕು. ಸಕಾಲದಲ್ಲಿ ರೈತರಿಗೆ ಅಗತ್ಯ ಮಾರ್ಗದರ್ಶನ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಸೂಚಿಸಿದರು.
ಕೃಷಿಗೆ ಅಗತ್ಯವಿರುವ ಬೀಜ, ರಸಗೊಬ್ಬರ, ಕೀಟನಾಶಕ ಎಲ್ಲವೂ ದಾಸ್ತಾನು ಇದ್ದರೂ ಅದು ಸಕಾಲದಲ್ಲಿ ರೈತರಿಗೆ ಸಿಗುವಂತಾಗಬೇಕು. ರೈತರಿಗೆ ತಾಂತ್ರಿಕ ವಿಚಾರಗಳನ್ನೂ ತಲುಪಿಸಬೇಕು. ಸಿಬ್ಬಂದಿ ಕಚೇರಿಯಲ್ಲಿ ಕುಳಿತು ನಿಗಾ ವಹಿಸುವ ಬದಲು ಜನರ ಬಳಿಗೆ ತೆರಬೇಕು ಎಂದರು.
ಶುಕ್ರವಾರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು. ಬೆಳೆ ನಷ್ಟವಾದ ಸಂದರ್ಭ ಅವರು ಆರ್ಥಿಕ ತೊಂದರೆ ಅನುಭವಿಸುವುದನ್ನು ಇದರಿಂದ ತಪ್ಪಿಸಬಹುದು ಎಂದು ಹೇಳಿದರು.
ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿದರೆ ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪರಿಹಾರ ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಬೇಕು. ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಸಕಾಲದಲ್ಲಿ ರೈತರಿಗೆ ನೆರವಾಗಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಕಳೆದ ವರ್ಷ ಬೆಳೆ ನಷ್ಟದ ಪರಿಹಾರದ ಬಾಬ್ತು 24 ಸಾವಿರ ರೈತರಿಗೆ 6 ಕೋಟಿ ರೂ. ನೀಡಲಾಗಿತ್ತು. ಬಳಿಕ ಸರ್ಕಾರದಿಂದ 24 ಕೋಟಿ ರೂ. ಬಿಡುಗಡೆಯಾಗಿತ್ತು. ಮಾರ್ಗಸೂಚಿ ಪ್ರಕಾರ ವಿತರಣೆ ಮಾಡಲಾಗಿದೆ ಎಂದರು.
ಮುಂಗಾರು ಹಂಗಾಮಿಗೆ ಇಲಾಖೆಯಿಂದ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ರೈತರಿಗೆ ಯಾವುದೇ ಸಮಸ್ಯೆಯಾಗಲು ಅವಕಾಶ ನೀಡುವುದಿಲ್ಲ. ಈ ವರ್ಷ ಬೆಳೆ ವಿಮೆಗೆ ನಮ್ಮ ಜಿಲ್ಲೆಯಲ್ಲಿ ಓರಿಯೆಂಟಲ್ ವಿಮಾ ಕಂಪನಿ ಆಯ್ಕೆಯಾಗಿದೆ. ಕಳೆದ ವರ್ಷ 41 ಸಾವಿರ ರೈತರು ವಿಮೆ ಕಂತು ಪಾವತಿಸಿದ್ದರು. ಈ ವರ್ಷ ಅದಕ್ಕೂ ಹೆಚ್ಚಿನ ರೈತರನ್ನು ನೋಂದಣಿ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ದೃಷ್ಟಿ ಜೈಸ್ವಾಲ್, ಉಪವಿಭಾಗಾಧಿಕಾರಿಗಳು, ಎಲ್ಲ ತಾಲೂಕಿನ ತಹಸೀಲ್ದಾರ್‌ಗಳು ಸಭೆಯಲ್ಲಿದ್ದರು.