ಬಾಳೆಹೊನ್ನೂರು: ನಿತ್ಯ ದಿನಪತ್ರಿಕೆ ಓದುವುದರಿಂದ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ನಾಗರೀಕ ವೇದಿಕೆ ಸಂಚಾಲಕ ಹಿರಿಯಣ್ಣ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಬುಧವಾರ ಆಯೋಜಿಸಿದ್ದ ರಸಪ್ರಶ್ನೆ, ಹಾಸ್ಯಗೋಷ್ಠಿ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ನೆನಪಿನ ಶಕ್ತಿಗೆ ರಸಪ್ರಶ್ನೆ ಸ್ಪರ್ಧೆ ಪೂರಕ. ಪತ್ರಿಕೆ ಓದುವುದರಿಂದ ದೇಶ ವಿದೇಶಗಳ ಸುದ್ದಿಗಳ ಜತೆಗೆ ರಾಜಕೀಯ, ಕಲೆ, ಸಾಹಿತ್ಯ, ಕ್ರೀಡಾಕೂಟಗಳ ಸಮಗ್ರ ಮಾಹಿತಿ ಪಡೆದು ಜ್ಞಾನ ವೃದ್ಧಿಸಿಕೊಳ್ಳಬಹುದು. ಪತ್ರಿಕೆ ಒಂದು ವಿಶ್ವವಿದ್ಯಾಲಯವಿದ್ದಂತೆ. ಹಾಸ್ಯಗೋಷ್ಠಿಗಳು ಬದುಕಿನ ಅವಿಭಾಜ್ಯ ಅಂಗ. ಹಾಸ್ಯ ಪ್ರಜ್ಞೆ ಇಲ್ಲದ ಬದುಕು ನಿರರ್ಥಕ ಎಂದರು.
ಕಸಾಪ ತಾಲೂಕು ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ ಮಾತನಾಡಿ, ಬಾಳೆಹೊನ್ನೂರಿನ ಹಿರಿಯ ಛಾಯಾಗ್ರಾಹಕ ಜಗದೀಶ್ ಅವರಿಗೆ ಇತ್ತೀಚೆಗೆ ಬೆಂಗಳೂರಿನ ಡಿಜಿ ಇಮೇಜ್ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟದಲ್ಲಿ ಸನ್ಮಾನಿಸಿರುವುದು ಹೆಮ್ಮೆಯ ಸಂಗತಿ. ಜಿಲ್ಲಾ ಚುಸಾಪಯಿಂದ ಛಾಯಾಗ್ರಾಹಕರನ್ನು ಸನ್ಮಾನಿಸಿರುವುದು ಶ್ಲಾಘನೀಯ ಎಂದರು.
ಚುಟುಕು ಸಾಹಿತ್ಯ ಪರಿಷತ್ ಕಳೆದ 27 ವರ್ಷಗಳಿಂದ ಚುಟುಕು ಕವಿಗೋಷ್ಠಿ, ಹಾಸ್ಯ ಗೋಷ್ಠಿ ನಡೆಸಿದೆ. ಸ್ಥಳೀಯ ಅನಕ್ಷರಸ್ಥ ಜಾನಪದ ಕಲಾವಿದರಿಗೆ ವೇದಿಕೆ ನಿರ್ಮಿಸಿ ಸನ್ಮಾನಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಸಪ್ರಶ್ನೆ ವಿಭಾಗದಲ್ಲಿ ಅಭಿಲಾಷ್ ತಂಡ (ಪ್ರ), ಮಿಥುನ್ ತಂಡ (ದ್ವಿ), ಸುಶ್ಮಿತಾ ತಂಡ (ತೃ) ಸ್ಥಾನ ಪಡೆದರು. ಚುಸಾಪ ಜಿಲ್ಲಾಧ್ಯಕ್ಷ ಯಜ್ಞಪುರುಷಭಟ್, ಪತ್ರಕರ್ತ ಪ್ರವೀಣ್ ಓಂಕಾರ್, ಮುಖ್ಯಶಿಕ್ಷಕ ಕೊಟ್ರೇಶಪ್ಪ, ಶಿಕ್ಷಕ ಹಾಲಪ್ಪ, ರಾಮಪ್ಪ ಛಲವಾದಿ, ತಮನ್ನಾ, ಸುಮನಾ, ರಮಿತಾ, ಅಸ್ಪಾ ಅಖ್ತರ್, ನವ್ಯಾ, ನಿಶಾಂತ್, ಶಾಹಿನ್, ಮಿಸ್ಪಾ ಇತರರಿದ್ದರು. ಸಾನ್ವಿಕ ಪ್ರಾರ್ಥಿಸಿ, ಪುಷ್ಪ ಸ್ವಾಗತಿಸಿದರು.