ಶಿವಮೊಗ್ಗದಲ್ಲಿ ಮೆಸ್ಕಾಂ ಶಿವಮೊಗ್ಗ ವಿಭಾಗದ ಅಧೀಕ್ಷಕ ಇಂಜಿನಿಯರ್ ಎಸ್.ಜಿ.ಶಶಿಧರ್, ಪದ್ಮಾ ದಂಪತಿಯನ್ನು ಸನ್ಮಾನಿಸಲಾಯಿತು. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಶ್ರೀ, ಎಸ್.ಎನ್.ಚನ್ನಬಸಪ್ಪ, ಎಸ್.ರುದ್ರೇಗೌಡ, ಡಾ. ಧನಂಜಯ ಸರ್ಜಿ, ಸಿ.ಎಸ್.ಷಡಾಕ್ಷರಿ ಇದ್ದರು. 
ನ್ಯೂಸ್

ನಿಸ್ವಾರ್ಥ ಸಮಾಜ ಸೇವೆಯಿಂದ ವ್ಯಕ್ತಿ ಶ್ರೇಷ್ಠ: ಸಾಣೇಹಳ್ಳಿ ಶ್ರೀ

ಶಿವಮೊಗ್ಗ: ಒಬ್ಬ ವ್ಯಕ್ತಿ ಶ್ರೇಷ್ಠನಾಗುವುದು ಹಣ ಅಥವಾ ಅಧಿಕಾರದಿಂದಲ್ಲ. ಸಾರ್ವಜನಿಕರ ಪರ ಕೆಲಸ ಮಾಡುವವರು ಶ್ರೇಷ್ಠರಾಗುತ್ತಾರೆ. ಸಾಧನೆಗೆ ಮೊದಲು ಅನುಮಾನ, ಆನಂತರ ಅವಮಾನ, ಕೊನೆಗೆ ಸಿಗುವುದೇ ಸನ್ಮಾನ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಮೆಸ್ಕಾಂ ಶಿವಮೊಗ್ಗ ವಿಭಾಗದ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಅಭಿಮಾನದ ಸನ್ಮಾನ ಮತ್ತು ಸಾರ್ಥಕ ಷಷ್ಠಿ ಕಾರ್ಯಕ್ರಮದ ಆಶೀರ್ವಚನ ನೀಡಿದ ಅವರು, ನಿವೃತ್ತಿ ಬಳಿಕ ಉಪೇಕ್ಷೆ ಮಾಡುವವರೇ ಹೆಚ್ಚು. ಅದಕ್ಕೆ ಅಪವಾದ ಎಂಬಂತೆ ಇಷ್ಟೊಂದು ನೌಕರರು ಸನ್ಮಾನಿಸಲು ಬಂದಿರುವುದು ಗಮನಿಸಿದರೆ ಎಸ್.ಜಿ.ಶಶಿಧರ್ ಮೇಲೆ ಅಭಿಮಾನ ಎಷ್ಟಿದೆ ಎಂಬುದು ಗೊತ್ತಾಗುತ್ತಿದೆ ಎಂದರು.
ವ್ಯಕ್ತಿಗೆ ನಿವೃತ್ತಿ ಎಂಬುದಿಲ್ಲ. ವೃತ್ತಿಯಿಂದ ನಿವೃತ್ತರಾದರೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಬಹಳಷ್ಟು ಜನ ತಮಗಾಗಿ ಮನೆ, ಆಸ್ತಿ ಮಾಡಿಕೊಂಡಿದ್ದಾರೆ. ಮಾಡಿದ ಪಾಪದಿಂದ ಜೈಲಿಗೂ ಹೋಗುತ್ತಾರೆ. ಹಾಗಾಗಿ ಸಾಮಾಜಿಕ ಜೀವನದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಪ್ರತಿಫಲ ಪಡೆದ ಮೇಲೆ ಮಾಡುವುದು ಸೇವೆ ಆಗುವುದಿಲ್ಲ, ಕರ್ತವ್ಯವಾಗುತ್ತದೆ. ಯಾವುದೇ ಫಲಾಪೇಕ್ಷೆ ಇಲದೇ ಕೆಲಸ ಮಾಡುವುದು ಮುಖ್ಯವಾಗುತ್ತದೆ. ಮುಪ್ಪಿನ ದಿನಗಳ ಬಗ್ಗೆ ಯೋಚನೆ ಮಾಡಬಾರದು. ಆರಂಭದ ಜೀವನದಲ್ಲಿ ಆಲೋಚನೆ ಮಾಡಬೇಕಿದೆ. ಇಲ್ಲವಾದರೆ ನಿವೃತ್ತಿ ಬಳಿಕ ಜೀವನ ಕಷ್ಟವಾಗುತ್ತದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ತ್ಯಾವರೆಚಟ್ನಳ್ಳಿಯಲ್ಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಮಾಣ ಮಾಡುತ್ತಿರುವ ಸಾಂಸ್ಕೃತಿಕ ಭವನಕ್ಕೆ ಮೊದಲ ಕಂತಿನ ಅನುದಾನದಲ್ಲಿ 25 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಎಂಎಲ್ಸಿ ಎಸ್.ರುದ್ರೇಗೌಡ ಮಾತನಾಡಿ, ಶಶಿಧರ್ ಅವರು ಕರ್ತವ್ಯ ನಿರ್ವಹಣೆ ಜತೆಗೆ ಸಾಮಾಜಿಕ ಸೇವೆಯನ್ನೂ ಮಾಡಿದ್ದಾರೆ. ಶಶಿಧರ್ ಅವರಂಥ ಕ್ರಿಯಾಶೀಲ ವ್ಯಕ್ತಿಯಿಂದ ಕೈಗಾರಿಕೆಗಳಿಗೆ ವಿದ್ಯುತ್ ಸಮಸ್ಯೆಗಳು ತಗ್ಗಿವೆ ಎಂದರು.
ಎಂಎಲ್ಸಿ ಡಾ. ಧನಂಜಯ ಸರ್ಜಿ ಮಾತನಾಡಿ, ಹುಟ್ಟುವಾಗ ಉಸಿರು ಇರುತ್ತೆ. ಹೆಸರು ಇರಲ್ಲ. ಸತ್ತ ಮೇಲೆ ಹೆಸರು ಇರುತ್ತೆ. ಉಸಿರು ಇರಲ್ಲ. ಈ ಹೆಸರು ಮತ್ತು ಉಸಿರಿನ ನಡುವೆ ಇರುವುದೇ ಜೀವನ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ತುಡಿತ, ಹಂಬಲ ಇರುವವರು ಮಾತ್ರ ತಮ್ಮ ನೌಕರರ ಪರ ಕೆಲಸ ಮಾಡುತ್ತಾರೆ. ಆ ತುಡಿತ, ಹಂಬಲ ಶಶಿಧರ್ ಅವರಲ್ಲಿದೆ. ಸಜ್ಜನ, ಸರಳ ವ್ಯಕ್ತಿತ್ವದವರು. ಕೆಲಸ ಮತ್ತು ಕಾಯಕದ ಮೂಲಕ ನಮ್ಮ ಜತೆಗಿದ್ದಾರೆ ಎಂದು ಹೇಳಿದರು. ಮೆಸ್ಕಾಂ ಶಿವಮೊಗ್ಗ ವಿಭಾಗದ ಅಧೀಕ್ಷಕ ಇಂಜಿನಿಯರ್ ಎಸ್.ಜಿ.ಶಶಿಧರ್, ಪದ್ಮಾ ದಂಪತಿಯನ್ನು ಸನ್ಮಾನಿಸಲಾಯಿತು.

ಬಹಳಷ್ಟು ನೌಕರರು ನಿವೃತ್ತಿ ಬಳಿಕ ಮಾನಸಿಕವಾಗಿ ಕುಗ್ಗುತ್ತಾರೆ. ಸುಖಕರ ಜೀವನದ ಬಗ್ಗೆ ಆರಂಭಿಕವಾಗಿ ಯೋಚಿಸಬೇಕು. ಜೀವನದಲ್ಲಿ ಮನುಷ್ಯನಿಗೆ ನಿವೃತ್ತಿ ಎಂಬುದೇ ಇಲ್ಲ. ನಿವೃತ್ತಿ ಬದಲು ಪ್ರವೃತ್ತಿ ರೂಢಿಸಿಕೊಳ್ಳಬೇಕು. ನಿವೃತ್ತಿ ಬಳಿಕವೂ ಮತ್ತಷ್ಟು ಸಮಾಜಿಕ ಕಾರ್ಯ ಮಾಡಬೇಕಾಗುತ್ತದೆ. ಆಗ ಸಮಾಜವು ಅವರನ್ನು ಶಾಶ್ವತವಾಗಿ ಸ್ಮರಿಸುತ್ತದೆ.- ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ, ಶಿವಮೊಗ್ಗ ಬೆಕ್ಕಿನ ಕಲ್ಮಠ