ನ್ಯೂಸ್

ಶಾಸಕ ಪ್ರದೀಪ್ ಈಶ್ವರ್ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಅಕೌಂಟ್ ತೆರೆದು ಜನರನ್ನು ವಂಚಿಸುತ್ತಿದ್ದ ವ್ಯಕ್ತಿ ಅರೆಸ್ಟ್…

ಚಿಕ್ಕಬಳ್ಳಾಪುರ: ಶಾಸಕರ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಅಕೌಂಟ್ ತೆರೆದು ಜನರಿಗೆ ವಂಚನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊರ್ವನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಮೂಲದ ವಾಹನ‌ ಚಾಲಕ ಮುದಾಸಿರ್ ಎಂಬಾತನನ್ನು ಬಂಧಿತ ಆರೋಪಿಯಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪ್ರದೀಪ್ ಈಶ್ವರ್ ನಿಮ್ಮೊಂದಿಗೆ ಎಂಬ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಅಕೌಂಟ್ ತೆರೆದು ವಂಚನೆ ಮಾಡುವುದರ ಜತೆಗೆ ತಾನು ಶಾಸಕರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಓಡಾಡುತ್ತಿದ್ದ.

ನಮ್ಮ ಸಾಹೇಬರ ಕಡೆಯಿಂದ ಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ಮಾಡಿಸಿಕೊಡುವುದಾಗಿ ನಂಬಿಸುತ್ತಿದ್ದ ವಂಚಕನಿಗೆ ಫೇಸ್​ಬುಕ್​ನಲ್ಲಿ ಖಾಸಿಂಸಾಬ್ ಎಂಬುವವರು ಸಹಾಯ ಕೇಳಿದ್ದರು. ಆಗ ಆರೋಪಿಯು ನನಗೆ ಫೋನ್​ಪೇ ಮಾಡು ನಿನಗೆ ತಾನು ನಮ್ಮ ಶಾಸಕರಾದ ಪ್ರದೀಪ್ ಈಶ್ವರ್ ಕಡೆಯಿಂದ 3 ರಿಂದ 4 ಲಕ್ಷ ರೂ.ಗಳ ಸಹಾಯ ಕೊಡಿಸುವುದಾಗಿ ಹೇಳಿದ್ದ.

ಇದನ್ನು ನಂಬಿ ಖಾಸೀಂಸಾಬ್ ತನ್ನ ಪೋನ್​ಪೆಯಿಂದ ಕ್ರಮವಾಗಿ 3000ರೂ ಮತ್ತು 2000 ರೂ.ನಂತೆ ಒಟ್ಟು 5000 ರೂಪಾಯಿ ಹಣ ಹಾಕಿದ್ದರು. ಇದರ ಜತೆಗೆ ವಂಚಕ ಇನ್ನೂ ಹಲವರಿಗೆ ಆನ್​ಲೈನ್ ಮೂಲಕ ವಂಚನೆ ಮಾಡುತ್ತಿರುವ ಬಗ್ಗೆ ಮಾಹಿತಿ ದೊರಕಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ ಕಲಂ. 419, 420 ಹಾಗೂ ಮಾಹಿತಿ ತಂತ್ರಜ್ಞಾನ ಆಕ್ಟ್ 2008ರ 66 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.(ಏಜೆನ್ಸೀಸ್​)