| ಶ್ರೀಕಾಂತ ಶೇಷಾದ್ರಿ ಬೆಂಗಳೂರು
ಕೆಲ ವರ್ಷಗಳ ಹಿಂದೆ ಸರ್ಕಾರವನ್ನೇ ಅಲುಗಾಡಿಸಿದ್ದ ತುಂಡುಗುತ್ತಿಗೆ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ರಾಜಕೀಯ ಒತ್ತಡಕ್ಕೆ ಸಿಲುಕಿದ ಸರ್ಕಾರ 5 ಲಕ್ಷ ರೂ. ಮೀರದ ಕಾಮಗಾರಿಗಳನ್ನು ನೋಂದಾಯಿತ ಗುತ್ತಿಗೆದಾರರಿಗೆ ನೇರವಾಗಿ ವಹಿಸುವ ಕುರಿತು ನಿರ್ಧಾರಕ್ಕೆ ಬರುವ ಮೂಲಕ ತನ್ನದೇ ಆದೇಶ, ಸುತ್ತೋಲೆಗೆ ವೈರುಧ್ಯ ಎಂಬಂಥ ನಿಲುವು ತೆಗೆದುಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳಡಿ ಕೈಗೊಳ್ಳುವ ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ 5 ಲಕ್ಷ ರೂ. ಮೀರದಂತಹ ಕಾಮಗಾರಿಗಳನ್ನು ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿತ ಗುತ್ತಿಗೆದಾರರಿಗೆ ನೇರವಾಗಿ ವಹಿಸಲು ಅವಕಾಶ ಮಾಡಿಕೊಡುವ ಆದೇಶ ಅ. 7ರಂದು ಪ್ರಕಟಗೊಂಡಿದೆ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿಗಳಿಗೆ ಸೀಮಿತಗೊಳಿಸಿ ಕರ್ನಾಟಕ ಪಾರದರ್ಶಕ ಅಧಿನಿಯಮ 1999ರಲ್ಲಿ 4 (ಇ)(ಐ)ನಲ್ಲಿನ ಅವಕಾಶ ಬಳಸಿಕೊಂಡು ಷರತ್ತಿಗೊಳಪಟ್ಟು ಗುತ್ತಿಗೆದಾರರಿಗೆ ಸಕ್ಷಮ ಪ್ರಾಧಿಕಾರದಿಂದಲೇ ನೀಡಲು ಅವಕಾಶ ಮಾಡಿಕೊಳ್ಳಲಾಗಿದೆ. ಅಚ್ಚರಿ ಎಂದರೆ, 2016ರ ಜೂ.25ರಂದು ಹೊರಟ ಲೋಕೋಪಯೋಗಿ ಇಲಾಖೆಯ ಸುತ್ತೋಲೆ ಪ್ರಕಾರ 5 ಲಕ್ಷ ರೂ. ಮಿತಿಯೊಳಗೆ ಕಾಮಗಾರಿಯನ್ನು ವಿಭಜಿಸಿ ಗುತ್ತಿಗೆ ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ನಿಯಮ ಬಾಹಿರವಾಗಿ ನಡೆದುಕೊಂಡರೆ ಅಧಿಕಾರಿ ಅಥವಾ ಇಂಜಿನಿಯರ್ಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಸಲಾಗಿತ್ತು.
ಇದೀಗ ಹೊರಟ ಆದೇಶದಲ್ಲಿ ಗುತ್ತಿಗೆ ನೀಡುವುದಕ್ಕೆ ಕೆಲವು ಷರತ್ತುಗಳನ್ನು ಹಾಕುವ ಪ್ರಸ್ತಾಪ ಮಾಡಲಾಗಿದೆ. ಒಂದೇ ಕಾಮಗಾರಿಯನ್ನು ಈ ವಿನಾಯಿತಿ ಮಿತಿಯೊಳಗೆ ತರುವ ಉದ್ದೇಶದಿಂದ ಕೃತಕವಾಗಿ ಕಾಮಗಾರಿ ವಿಂಗಡಿಸಿ ಸಣ್ಣ ಸಣ್ಣ ಅಂದಾಜುಗಳಲ್ಲಿ ವಿಭಜಿಸುವಂತಿಲ್ಲ. ಒಂದು ವೇಳೆ ಯಾವುದೇ ಪ್ರಾಧಿಕಾರ/ ಅಧಿಕಾರಿ ಕೆಟಿಟಿಪಿ ಕಾಯ್ದೆ ಮತ್ತು ನಿಯಮಗಳ ಅನುಸಾರ ಟೆಂಡರ್ ಕೈಗೊಳ್ಳುವುದನ್ನು ತಪ್ಪಿಸಲು ಕಾಮಗಾರಿ ಅಥವಾ ಅಂದಾಜನ್ನು ವಿಭಜನೆ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ಶಿಸ್ತುಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ತುಂಡುಗುತ್ತಿಗೆ ಅಕ್ರಮದ ಬಗ್ಗೆ ವಿಜಯವಾಣಿ 2021ರ ಆ. 4ರಂದು ವಿಶೇಷ ವರದಿ ಪ್ರಕಟಿಸಿತ್ತು. ನಿಯಮಬಾಹಿರವಾಗಿ ಕಾಮಗಾರಿ ವಿಭಜಿಸಿ ಹಂಚಿಕೆ ಮಾಡುತ್ತಿರುವುದು ಮತ್ತು ಪ್ರಭಾವಿಗಳ ಕೈವಾಡದ ಶಂಕೆ ಇರುವ ಪ್ರಸ್ತಾಪ ಮಾಡಲಾಗಿತ್ತು. ಇದೀಗ ಅ.7ರಂದು ಈ ಅಕ್ರಮ ದಾರಿಯನ್ನು ಸಕ್ರಮ ಮಾಡಿಕೊಡಬೇಕೆಂಬ ಆದೇಶ ಹೊರಬಿದ್ದಿದೆ.
ಐದು ಲಕ್ಷ ರೂ. ಒಳಗಿನ ಕಾಮಗಾರಿಯನ್ನು ಟೆಂಡರ್ ಕರೆಯದೆ ಗುತ್ತಿಗೆದಾರರಿಗೆ ನೇರವಾಗಿ ನೀಡುವ ವಿಚಾರವಾಗಿ ಬಹುತೇಕ ಎಲ್ಲ ಪಕ್ಷದ ಶಾಸಕರಿಗೂ ಒಲವಿದೆ. ತಮ್ಮ ಹಿಂಬಾಲಕರಿಗೆ ಗುತ್ತಿಗೆ ಕೊಡಿಸಲು ಈ ವಿನಾಯಿತಿಯಿಂದ ಅನುಕೂಲ, ಜತೆಗೆ ಕಾಮಗಾರಿಯನ್ನು ವಿಭಜಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಅವಕಾಶ ಸಿಗಲಿದೆ. ಅಲ್ಲದೇ, ಕಾಮಗಾರಿ ವಿಭಜಿಸಿ ಗುತ್ತಿಗೆ ನೀಡುವುದು ಕಷ್ಟವೇನಲ್ಲ. ಅದಕ್ಕೊಂದು ಸಿದ್ಧ ಕಾರಣ ಇದ್ದೇ ಇರುತ್ತದೆ. ಹೀಗೆ ಮಾಡುವುದರಿಂದ ಸಹಜವಾಗಿ ದೊಡ್ಡ ದೊಡ್ಡ ಮೊತ್ತದ ಕಾಮಗಾರಿಗಳನ್ನು ಟೆಂಡರ್ ಕರೆಯದೆ, ವಿಭಜಿಸಿ ತಮಗೆ ಬೇಕಾದವರಿಗೆ ಹಂಚಿಕೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅಧಿಕಾರಿಗಳು ಮಾತ್ರ ಬೇರೆ ಸಬೂಬು ಹೇಳುತ್ತಿದ್ದಾರೆ. ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಜಿಲ್ಲಾ ಪಂಚಾಯಿತಿಗಳು ಕೈಗೊಳ್ಳುವ ನಿರ್ಮಾಣ ಕಾಮಗಾರಿಗಳಿಗೆ ವಿನಾಯಿತಿ ನೀಡಲಾಗಿದೆ. ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕೈಗೊಳ್ಳುವ 2 ಲಕ್ಷ ರೂ. ಒಳಗಿನ ಶಾಲಾ ಕೊಠಡಿ ನಿರ್ಮಾಣ ಮತ್ತು ಕಿರು ನೀರು ಸರಬರಾಜು ಕಾಮಗಾರಿಗಳಿಗೆ ವಿನಾಯಿತಿ ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಅವಕಾಶ ಮಾಡಿಕೊಂಡಿರುವಾಗ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲೂ ಕಾಮಗಾರಿ ಬೇಗ ಅನುಷ್ಠಾನ ಮಾಡಲು ಅವಕಾಶ ಮಾಡಿಕೊಳ್ಳಲಾಗಿದೆ ಎಂದು ವಿವರಿಸುತ್ತಾರೆ.
ಅಸೆಂಬ್ಲಿಯಲ್ಲೂ ಚರ್ಚೆ ಆಗಿತ್ತು: ಟೆಂಡರ್ ಕರೆಯದೇ ನೇರವಾಗಿ ಗುತ್ತಿಗೆದಾರರಿಗೆ ಹಂಚಿಕೆ ಮಾಡುವುದರಿಂದ ಆಗುವ ಅವ್ಯವಹಾರ, ದುರುಪಯೋಗದ ಬಗ್ಗೆ ಈ ಹಿಂದೆ ವಿಧಾನಸಭೆಯಲ್ಲಿ ಚರ್ಚೆಯಾಗಿತ್ತು. ಜತೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲೂ ಚರ್ಚೆಯಾಗಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ನಿರ್ಣಯ ಕೂಡ ಕೈಗೊಳ್ಳಲಾಗಿತ್ತು. ಆದರೆ, ಈಗ ವಿವಿಧ ನೆಪ ಹುಡುಕಿಕೊಂಡು 5 ಲಕ್ಷ ರೂ. ಒಳಗಿನ ಕಾಮಗಾರಿಯನ್ನು ನೇರವಾಗಿ ಗುತ್ತಿಗೆದಾರರಿಗೆ ಹಂಚಿಕೆ ಮಾಡಲು ಅವಕಾಶ ಮಾಡಿಕೊಳ್ಳಲಾಗಿದೆ.