ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ತರಗತಿ ಬೋಧನೆ ಮಾಡಲು ಮಾರ್ಗಸೂಚಿ ರಚಿಸುವಂತೆ ರೂಪಿಸಿರುವ ತಜ್ಞರ ಸಮಿತಿ ವರದಿ ನೀಡುವ ಮೊದಲೇ ರಾಜ್ಯ ಸರ್ಕಾರ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ (ಎಂಎಚ್ಆರ್ಡಿ) ನೀಡುವ ಮಾರ್ಗಸೂಚಿಯನ್ನೇ ಪಾಲಿಸುವಂತೆ ಸೂಚನೆ ನೀಡಿದೆ.
ಆ ಪ್ರಕಾರವಾಗಿ ಪೂರ್ವಪ್ರಾಥಮಿಕ ಶಾಲೆ 30 ನಿಮಿಷ ಮೀರದಂತೆ ಪಾಲಕರೊಂದಿಗೆ ಮಾತ್ರ ವಾರಕ್ಕೆ ಒಂದು ದಿನ ಆನ್ಲೈನ್ ಸಂವಹನ ಮತ್ತು ಮಾರ್ಗದರ್ಶನ ನೀಡಬಹುದು. ಆನ್ಲೈನ್ ಶಿಕ್ಷಣದ ಹೆಸರಿನಲ್ಲಿ ರಾಜ್ಯದ ಸುಮಾರು ಶಾಲೆಗಳು ಅವೈಜ್ಞಾನಿಕವಾಗಿ ಬೋಧಿಸುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯುಲ್ಲಿ ಮಾರ್ಗಸೂಚಿ ರಚಿಸಲು ಶಿಕ್ಷಣ ಇಲಾಖೆ ಸಮಿತಿ ರಚನೆ ಮಾಡಿದೆ. ಈ ಮಧ್ಯೆ ಹೈಕೋರ್ಟ್, ಸಮಿತಿ ವರದಿ ನೀಡುವವರೆಗೆ ಸೀಮಿತ ಅವಧಿಯ ಆನ್ಲೈನ್ ಶಿಕ್ಷಣ ಒದಗಿಸಲು ಅವಕಾಶ ಮಾಡಿಕೊಡಬೇಕೆಂದು ಹೇಳಿದೆ. ಅಲ್ಲದೆ, ಎಂಎಚ್ಆರ್ಡಿ ರಾಜ್ಯಗಳ ವಿವೇಚನೆಗೆ ಒಳಪಟ್ಟು ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸಬಹುದಾದ ಆನ್ಲೈನ್ ಶಿಕ್ಷಣದ ಕುರಿತು ಮಾರ್ಗಸೂಚಿ ಹೊರಡಿಸಿದೆ. ಅದನ್ನೇ ರಾಜ್ಯ ಸರ್ಕಾರ ಪಾಲಿಸಲು ಸೂಚಿಸಿದೆ. ಈ ಹೊಸ ಮಾರ್ಗಸೂಚಿ ರಾಜ್ಯ ಸರ್ಕಾರ ನೇಮಿಸಿರುವ ತಜ್ಞರ ವರದಿ ನೀಡಿ ಅದರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವವರೆಗೂ ಮಾತ್ರವೇ ಅನ್ವಯಿಸಲಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಅಲ್ಲದೆ, ನಿಯಮಿತ ಶಿಕ್ಷಣಕ್ಕೆ ಪೂರಕವಾಗಿ ಆನ್ಲೈನ್ ಶಿಕ್ಷಣ ಒದಗಿಸಬೇಕಾಗಿ ಬಂದಿರುವುದರಿಂದ ಆನ್ಲೈನ್ ಶಿಕ್ಷಣಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದಾಗಿ ತಿಳಿಸಿದೆ. ಇದಕ್ಕಾಗಿ ತಗಲುವ ವೆಚ್ಚವನ್ನು ನಿಯಮಿತ ವಾರ್ಷಿಕ ಬೋಧನಾ ಶುಲ್ಕದಿಂದಲೇ ಭರಿಸಬೇಕೆಂದು ಸ್ಪಷ್ಟವಾಗಿ ತಿಳಿಸಿದೆ.
* 1ರಿಂದ 5ನೇ ತರಗತಿ: 30-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ದಿನ ಬಿಟ್ಟು ದಿನ ವಾರದಲ್ಲಿ ಗರಿಷ್ಠ 3 ದಿನ ಆನ್ಲೈನ್ ಶಿಕ್ಷಣ ನೀಡಬಹುದು.
* 6-8ನೇ ತರಗತಿ: 30-45 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ವಾರದಲ್ಲಿ ಗರಿಷ್ಠ 5 ದಿನ ಆನ್ಲೈನ್ ಶಿಕ್ಷಣ ನೀಡಬಹುದು.
* 9-10ನೇ ತರಗತಿ: 30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ವಾರದಲ್ಲಿ ಗರಿಷ್ಠ 5 ದಿನ ಆನ್ಲೈನ್ ಶಿಕ್ಷಣ ನೀಡಬಹುದು.