ನ್ಯೂಸ್

ಶಾಶ್ವತ ಪರಿಹಾರ ಆದ್ಯತೆಯಾಗಲಿ: ಪರಿಹಾರ ಕ್ರಮಗಳು ಸಭೆಗೆ ಸೀಮಿತ ಆಗದಿರಲಿ

Ravikanth Kundapura

ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಮರೋಪಾದಿಯಲ್ಲಿ ಸನ್ನದ್ಧರಾಗಬೇಕು ಎಂದು ಸರ್ಕಾರ ಪ್ರತಿ ವರ್ಷ ಮಳೆಗಾಲದಲ್ಲಿ ಅಧಿಕಾರಿಗಳಿಗೆ ಆದೇಶ ಮಾಡುವುದು ಪರಿಪಾಠವಾಗಿದೆ. ಅತಿವೃಷ್ಟಿಯಿಂದ ಎದುರಾಗುವ ಎಷ್ಟೋ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಿದ್ದರೂ ಗಂಭೀರವಾಗಿ ಚಿಂತನೆ ಮಾಡುತ್ತಿಲ್ಲ. ಸದ್ಯದ ಸ್ಥಿತಿ ನಿಭಾಯಿಸಿದರೆ ಸಾಕು, ಮುಂದಿನ ವರ್ಷ ನೋಡೋಣ ಎನ್ನುವ ಮನೋಭಾವ ಕೂಡ ಇದಕ್ಕೆ ಕಾರಣ. ಮುಖ್ಯವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದಲ್ಲಿ ಇಚ್ಚಾಶಕ್ತಿ ಕೊರತೆಯೂ ಇದೆ ಎನ್ನುವುದರಲ್ಲಿ ಸಂದೇಹ ಇಲ್ಲ.

ಬೆಂಗಳೂರಿನಲ್ಲಿ ಬಿರುಸಾದ ಮಳೆ ಬಂದರೆ ಸಾಕು ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಪ್ರತಿ ಮಳೆಗಾಲದಲ್ಲೂ ಕೆಲವು ಪ್ರದೇಶಗಳಲ್ಲಿ ಪ್ರವಾಹದ ಸ್ಥಿತಿ ನಿರ್ವಣವಾಗುತ್ತದೆ. ರಾಜಧಾನಿಯ ಪ್ರತಿ ವರ್ಷದ ಸರಾಸರಿ ಮಳೆ ಪ್ರಮಾಣ, ಎಲ್ಲೆಲ್ಲಿ ಪ್ರವಾಹ ಸ್ಥಿತಿ ನಿರ್ವಣವಾಗುತ್ತದೆ, ಅತಿ ಹೆಚ್ಚು ತೊಂದರೆಗೊಳಗಾಗುವ ಪ್ರದೇಶಗಳು ಯಾವುವು? ಮತ್ತು ಈ ಸಮಸ್ಯೆಗಳಿಗೆ ಪರಿಹಾರ ಏನು? ಎಂಬ ಬಗ್ಗೆ ಸಮಗ್ರ ವರದಿ ಕೊಡಿ ಎಂದು ಕಂದಾಯ ಸಚಿವರು ವಿಪತ್ತು ನಿರ್ವಹಣೆ ವಿಭಾಗದ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕೆರೆಗಳ ಒತ್ತುವರಿ ಹಾಗೂ ರಾಜಕಾಲುವೆಗಳಲ್ಲಿ ಹೂಳು ತುಂಬಿರುವುದು ಬೆಂಗಳೂರಿನ ಪ್ರಮುಖ ಸಮಸ್ಯೆ ಎಂಬುದು ಗೊತ್ತಿರುವ ಸಂಗತಿ. ಪ್ರವಾಹದಿಂದ ಸಂಭವಿಸಬಹುದಾದ ಸಮಸ್ಯೆಗಳ ಪರಿಹಾರಕ್ಕೆ ಏನೆಲ್ಲ ಕ್ರಮ ಜರುಗಿಸಬಹುದು ಎಂಬ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಿ ಮುಂದಿನ ಮಳೆಗಾಲಕ್ಕೂ ಮುನ್ನ ಜಾರಿಗೊಳಿಸಿ ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನಂತೆಯೇ ರಾಜ್ಯದ ಹಲವು ಜಿಲ್ಲೆಗಳು ಮಳೆಗಾಲದಲ್ಲಿ ಅತಿ ಹೆಚ್ಚು ಸಮಸ್ಯೆಗೆ ತುತ್ತಾಗುತ್ತವೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಳೆಯಾದರೆ ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ವಣವಾಗಲಿದೆ. ಹಲವು ಹಳ್ಳಿಗಳು ಜಲಾವೃತಗೊಳ್ಳಲಿವೆ. ಇದು ಪ್ರತಿ ಮಳೆಗಾಲದ ಸಮಸ್ಯೆ. ಜಲಾಶಯಗಳು ಭರ್ತಿಯಾದಾಗ ನದಿಗಳು, ಕಾಲುವೆಗಳಿಗೆ ನೀರು ಹರಿಸುವುದು ಸಾಮಾನ್ಯ. ಆಗ ಅನೇಕ ಪ್ರದೇಶಗಳು ಮುಳುಗಡೆ ಭೀತಿ ಎದುರಿಸುತ್ತವೆ.

ಜಲಾವೃತ ಸಮಸ್ಯೆ ಮಲೆನಾಡಿನಲ್ಲೂ ಇದೆ. ತುಂಗಾ ಜಲಾಶಯ ಮೊದಲ ಮಳೆಗೆ ಭರ್ತಿಯಾಗಲಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಿದಾಗ ಶಿವಮೊಗ್ಗದ ಹಲವು ಬಡಾವಣೆಗಳು ಜಲಾವೃತಗೊಳ್ಳುತ್ತವೆ. ಎರಡು ವರ್ಷಗಳ ಹಿಂದೆ ಸಂಭವಿಸಿದ ಅನಾಹುತದ ಪರಿಣಾಮಗಳೇನು ಎಂಬುದು ಗೊತ್ತೇ ಇದೆ.

ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಯಾವ ಜಿಲ್ಲೆಗಳು ಅತಿ ಹೆಚ್ಚು ಬಾಧಿತವಾಗುತ್ತಿವೆ? ಮತ್ತು ಪರಿಹಾರ ಕ್ರಮಗಳೇನು? ಎಂಬ ವರದಿ ಪಡೆದು ಜಾರಿಗೆ ಪ್ರಯತ್ನಿಸಬೇಕು. ಮುಳುಗಡೆ ಪ್ರದೇಶಗಳನ್ನು ಗುರುತಿಸಿ ಸ್ಥಳಾಂತರ ಮಾಡಬೇಕು. ಮಹಾನಗರಗಳಲ್ಲಿನ ರಾಜಕಾಲುವೆಗಳ ಹೂಳನ್ನು ತೆಗೆಸಿ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡಬೇಕು.

ಉತ್ತರ ಭಾರತದಲ್ಲಿ ಪ್ರವಾಹದಿಂದ ಸಂಭವಿಸಿದ ದುರಂತಗಳು ಕರ್ನಾಟಕಕ್ಕೂ ಪಾಠವಾಗಬೇಕು. ಬೀಸುವ ದೊಣ್ಣೆಯಿಂದ ಪಾರಾಗುವ ಮನೋಭಾವ ಬಿಡಬೇಕು. ಪ್ರವಾಹ ಸಮಸ್ಯೆಯನ್ನು ಲಘುವಾಗಿ ಪರಿಗಣಿಸದೆ ಶಾಶ್ವತ ಪರಿಹಾರ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರಬೇಕು.