ಕೋಲಾರ ಟೇಕಲ್​ ರಸ್ತೆ ಕೋರಗಂಡಹಳ್ಳಿ ಬಳಿ ರಸ್ತೆ ಕೆರೆಯಂತಾಗಿದೆ, ಮುದುವತ್ತಿ ಬಳಿ ಗುಂಡಿಗಳು, ಇಟಿಸಿಎಂ ಆಸ್ಪತ್ರೆ ಪಕ್ಕದ ರಸ್ತೆಗೆ ವರ್ಷಕಳೆದರೂ ದುರಸ್ತಿ ಕಂಡಿಲ್ಲ. ಶ್ರೀನಿವಾಸಪುರ ತಾಲೂಕು ಗುಂಡಮನತ್ತ ಗ್ರಾಮದ ಬಳಿ ರಸ್ತೆ ಮಧ್ಯೆ ಬಿದ್ದಿರುವ ಹೊಂಡ. ಮಂದಗತಿಯಲ್ಲಿ ವಾಹನ ಸಂಚಾರ. ಎಪಿಎಂಸಿ ಬಳಿ ಬಿದ್ದಿರುವ ಗುಂಡಿಗಳು.ವೇಣುಗೋಪಾಲಸ್ವಾಮಿ ದೇಗುಲ ಹಿಂಭಾಗದ ಶಾರದಾ ಟಾಕೀಸ್​ ರಸ್ತೆ ಮಧ್ಯೆ ಗುಂಡಿ. ಕೋಲಾರಮ್ಮ ಕೆರೆ&ಕಟ್ಟೆ ಕೆಳಗೆ ಹಳೆಯ ಮದ್ರಾಸ್​ ರಸ್ತೆ ಹಾಳಾಗಿದೆ.ಕೋರ್ಟ್​ ಸರ್ಕಲ್​ ಬಳಿ ಹಾಳಾಗಿರುವ ರಸ್ತೆ.ಕೋಲಾರದ ಸಹ್ಯಾದ್ರಿ ಕಾಲೇಜು ಬಳಿಯ ರಸ್ತೆ. 
ನ್ಯೂಸ್

ಜನಪ್ರತಿನಿಧಿಗಳ ಗಂಡಾಗುಂಡಿ…ರಸ್ತೆಗಳೆಲ್ಲ ಗುಂಡಿಮಯ!

ಕೋಲಾರ: ಜಿಲ್ಲೆಯಲ್ಲಿ ಮೊದಲೇ ಹಾಳಾಗಿದ್ದ ರಸ್ತೆಗಳು ಜಡಿಮಳೆಗೆ ಮತ್ತಷ್ಟು ಹಾಳಾಗಿವೆ. ಜನರು ನೀರು ತುಂಬಿದ ಗುಂಡಿಗಳ ಆಳ ಅರಿಯದೆ ಸಂಚರಿಸುವಂತಾಗಿದೆ.

ಕೋಲಾರಕ್ಕೆ ಸಂಪರ್ಕ ಕಲ್ಪಿಸುವ ಕೊತ್ತಪಲ್ಲಿ&ಮಾಸ್ತಿ ರಾಜ್ಯ ಹೆದ್ದಾರಿಯಲ್ಲಿ ಬೈಪಾಸ್​ನಿಂದ ಟೇಕಲ್​ವರೆಗೆ, ವೀರಾಪುರದಿಂದ ಮುದುವಾಡಿವರೆಗಿನ ಶ್ರೀನಿವಾಸಪುರ ತನಕ, ಕೋಲಾರಮ್ಮ ಕೆರೆ&ಕಟ್ಟೆ ಕಳಗೆ ಮತ್ತು ಬೇತಮಂಗಲ ರಸ್ತೆಯಲ್ಲಿ ಭಟ್ರಹಳ್ಳಿತನಕ, ಬಂಗಾರಪೇಟೆ ಹೆದ್ದಾರಿಯಲ್ಲಿ ನಗರದ ಅಂಬೇಡ್ಕರ್​ ವೃತ್ತದಿಂದ ಬೈಪಾಸ್​ ತನಕ, ಶ್ರೀನಿವಾಸಪುರ ರಸ್ತೆಯಲ್ಲಿ ಮುದುವಾಡಿ ಕಟ್ಟೆ ಮೇಲೆ, ಮಾಲೂರು ರಸ್ತೆಯ ಎಪಿಎಂಸಿ ಮುಂಭಾಗ ಮತ್ತು ನಗರದಲ್ಲಿ ಬಹುತೇಕ ರಸ್ತೆಗಳು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿವೆ.

ಎಲ್ಲೆಡೆ ಗುಂಡಿಮಯವಾಗಿದ್ದು, ಸಾರ್ವಜನಿಕರು ಸುರಕ್ಷಿತವಾಗಿ ಮನೆಗೆ ವಾಪಸ್​ ಬರುತ್ತೇವೆ ಎಂಬ ನಂಬಿಕೆ ಉಳಿದಿಲ್ಲ. ಗುಂಡಿಗಳಿರಲಿ, ಬೃಹತ್​ ಹಳ್ಳಗಳು, ಕೆರೆ&ಕುಂಟೆಯಂತಾದ ರಸ್ತೆಗಳಿಗೇನೂ ಕಡಿಮೆಯಿಲ್ಲ. ರಾಜ್ಯ, ಜಿಲ್ಲಾ ಮುಖ್ಯರಸ್ತೆಗಳು ಮತ್ತು ಗ್ರಾಮಗಳ ಸಂಪರ್ಕ ರಸ್ತೆಗಳು ಹಾಳಾಗಿವೆ. ಒಟ್ಟಾರೆ ಹೇಳುವುದಾದರೆ "ಗುಂಡಿ ಇಲ್ಲದ ರಸ್ತೆ ಇಲ್ಲ'ಎಂಬಂತೆ ಜಿಲ್ಲೆಯಲ್ಲಿ ರಸ್ತೆಗಳು ಭಾಸವಾಗುತ್ತಿವೆ.

ಮೊದಲೇ ಹಾಳಾಗಿದ್ದ ರಸ್ತೆಗಳು ಮಳೆಗೆ ಮತ್ತಷ್ಟು ಹದಗೆಟ್ಟಿವೆ. ಹೆಚ್ಚು ಗುಂಡಿಗಳು ಬಿದ್ದಿದ್ದ ಕಡೆ ಪಿಡಬ್ಲ್ಯೂಡಿ, ಪಂಚಾಯತ್​ರಾಜ್​ ಇಂಜಿನಿಯರಿಂಗ್​ ವಿಭಾಗದ ಅಧಿಕಾರಿಗಳು ಜೆಸಿಬಿಗಳನ್ನು ಬಳಸಿ ರಸ್ತೆಗಳನ್ನು ಕಿತ್ತುಹಾಕಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದರು. ಆದರೆ ರಸ್ತೆ ಸಡಿಲಗೊಳಿಸಿದ್ದರಿಂದ ಅಂತಹ ಕಡೆ ಗದ್ದೆಯಂತಾಗಿದ್ದು ವಾಹನಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿವೆ. ಇಂತಹ ಕಡೆ ಎರಡುಮೂರು ಅಡಿ ನೀರು ತುಂಬಿಕೊಂಡಿರುವುದರಿಂದ ದ್ವಿಚಕ್ರವಾಹನ ಸವಾರರು ಯಾತನೆ ಅನುಭವಿಸುತ್ತಿದ್ದಾರೆ. ಬಹುತೇಕ ರಸ್ತೆಗಳಲ್ಲಿ ಡಾಂಬರು, ಜಲ್ಲಿಮಯವಾಗಿದ್ದು ಜನರು ದೇವರ ಮೇಲೆ ಭಾರ ಹಾಕಿ ವಾಹನ ಚಲಾಯಿಸುತ್ತಿದ್ದಾರೆ.