ಬೆಂಗಳೂರು: ಸಾಮಾಜಿಕ ನ್ಯಾಯ, ದಮನಿತರ ಪರವೆಂದು ಕಾಂಗ್ರೆಸ್ ಪಕ್ಷ ಹೇಳುತ್ತಿದೆ. ಆದರೂ ದಲಿತರಿಗೆ ವ್ಯವಸ್ಥಿತವಾಗಿದೆ ವಂಚಿಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿ, ದಲಿತರ ಜನಾಂದೋಲನ ಹಮ್ಮಿಕೊಳ್ಳಲು ತೀರ್ಮಾನಿಸಿದೆ.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾ.5ರಂದು ಬೃಹತ್ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಲು ಮುಂದಾಗಿದೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಪೂರ್ವ ತಯಾರಿ ಸಭೆ ನಡೆಸಿ, ಆಂದೋಲನ ರೂಪರೇಷೆ ಬಗ್ಗೆ ಚರ್ಚಿಸಿತು.
ರಾಜ್ಯದಿಂದ ಆಯ್ದ, ಬೆಂಗಳೂರು ಆಸುಪಾಸಿನ ಜಿಲ್ಲೆಗಳಿಂದ 15 ಸಾವಿರಕ್ಕೂ ಹೆಚ್ಚು ದಲಿತರು ಸೇರಿ ವಿವಿಧ ಸಮುದಾಯಗಳನ್ನು ಜನರನ್ನು ಸೇರಿಸಲು ನಿರ್ಧರಿಸಿದೆ. ಸದನದ ಒಳಗೆ, ಹೊರಗೆ ಏಕ ಕಾಲಕ್ಕೆ ಹೋರಾಟ ನಡೆಸಲು ಪಕ್ಷ ಸನ್ನದ್ಧವಾಗಿದೆ.
ಪರಿಶಿಷ್ಟ ಜಾತಿ, ಪಂಗಡಗಳ ಉಪ ಯೋಜನೆ ಅನುದಾನದ ಪೈಕಿ ಕಳೆದ ವರ್ಷದ್ದೂ ಸೇರಿ 25 ಸಾವಿರ ಕೋಟಿ ರೂ. ಬಳಸಿಕೊಂಡಿದೆ. ಸರ್ಕಾರದ ಈ ಕ್ರಮದ ವಿರುದ್ಧ 14 ತಂಡಗಳು ಜಿಲ್ಲೆಯಲ್ಲಿ ಪ್ರವಾಸ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ.
ಅನ್ಯ ಯೋಜನೆಗಳಿಗೆ ಬಳಸಿದ್ದೂ ಸಾಲದೆಂಬಂತೆ ಉಳಿದ ಅನುದಾನದಡಿ ವಿವಿಧ ಇಲಾಖೆಗಳು ಮತ್ತು ನಿಗಮಗಳಿಗೆ ಹಂಚಿಕೆ ಮಾಡಿದ ಅನುದಾನವನ್ನು ಕಡಿತಗೊಳಿಸಿದೆ. ಇದರಿಂದಾಗಿ ಜಲಸಂಪನ್ಮೂಲ ಇಲಾಖೆ, ವಿವಿಧ ನಿಗಮಗಳಿಗೆ ಸಮಸ್ಯೆಯಾಗಿದೆ.
ಗಂಗಾ ಕಲ್ಯಾಣ, ಸ್ವಾವಲಂಬಿ ಜೀವನಕ್ಕೆ ನೆರವಾಗುವ ನೇರ ಸಾಲ ಮತ್ತಿತರ ಕಾರ್ಯಕ್ರಮಗಳಿಗೆ ಲಾನುಭವಿಗಳ ಗುರಿಯನ್ನೂ ಕಡಿತಗೊಳಿಸಿವೆ ಎಂದು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ, ವಿವಿಧ ಇಲಾಖೆಗಳ ಅನುದಾನ ಕಡಿತ, ಗ್ಯಾರಂಟಿಗಳಿಗೆ ಅನುದಾನ ಬಳಸಿಕೊಂಡು ಶೋಷಿತರ ಮೂಗಿಗೆ ತುಪ್ಪ ಹಚ್ಚಿ, ಕಾಂಗ್ರೆಸ್ ಸರ್ಕಾರ ವ್ಯವಸ್ಥಿತವಾಗಿ ವಂಚಿಸುತ್ತಿದೆ ಎಂದು ಬಿಜೆಪಿ ದೂರಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಆಂದೋಲನ ನಡೆಯಲಿದ್ದು, ವಿಧಾನ ಮಂಡಲದ ಉಭಯ ಸದನಗಳು ನಾಯಕರು, ಮಾಜಿ ಸಂಸದ-ಶಾಸಕರು, ಮುಖಂಡರು, ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಸಭೆ ಒಪ್ಪಿದೆ.
ಮೂರು ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಧಾನಿಯಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ಮೂಲಕ ಸರ್ಕಾರದ ಗಮನಸೆಳೆದು, ಒತ್ತಡ ಹೇರಲು ಸಭೆ ನಿರ್ಧರಿಸಿತು ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಸಭೆಯಲ್ಲಿ ಪಕ್ಷದ ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ ಜಿಲ್ಲಾ ಘಟಕಗಳ ಅಧ್ಯಕ್ಷ ಸಿ.ಕೆ.ರಾಮಮೂರ್ತಿ, ಎಸ್.ಹರೀಶ್, ಸಪ್ತಗಿರಿಗೌಡ, ಮಾಜಿ ಕಾರ್ಪೋರೇಟರ್‌ಗಳು ಇನ್ನಿತರ ಮುಖಂಡರು ಭಾಗವಹಿಸಿದ್ದರು.