ಶಿವಮೊಗ್ಗ: ರೈತರಿಗೆ ಈವರೆಗೆ ಸರ್ಕಾರಗಳು ಆಶ್ವಾಸನೆಗಳನ್ನು ನೀಡಿದ್ದು ಸಾಕು. ಕೂಡಲೇ ಸ್ಪಷ್ಟ ತೀರ್ಮಾನ ಹೊರಬರಬೇಕು. ಇಲ್ಲದಿದ್ದರೆ ಚಳವಳಿ ಅನಿವಾರ್ಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ.
ಸರ್ಕಾರಗಳು ರೈತರಿಗೆ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ಕೂಡ ಇದಕ್ಕೆ ಹೊರತಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಚುನಾವಣೆಗೂ ಮುಂಚೆ ರೈತರ ಪರವಾಗಿ ಇರುತ್ತೇನೆ ಎಂದು ಮಾತು ಕೊಟ್ಟಿದ್ದರು. ಈಗ ಮಾತನ್ನು ಅವರು ಉಳಿಸಿಕೊಳ್ಳುತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಿದ್ದರಾಮಯ್ಯ ಮಾ.7ರಂದು ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟನ್ನು ಸಮಗ್ರವಾಗಿ ವಿಶ್ಲೇಷಣೆಗೊಳಪಡಿಸಲು ಸಂಯುಕ್ತ ಹೋರಾಟ ಕರ್ನಾಟಕದಿಂದ ಮಾ.12 ಮತ್ತು 13ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಜನಚಳವಳಿಗಳ ಬಜೆಟ್ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಅಸಂಘಟಿತ, ಅನೌಪಚಾರಿಕ, ಸ್ಕೀಂ, ಗುತ್ತಿಗೆ ಮುಂತಾದ ಕಾರ್ಮಿಕರು ಹಾಗೂ ನೌಕರರ ಉದ್ಯೋಗ ಭದ್ರತೆ, ಸಾಮಾಜಿಕ ಕಲ್ಯಾಣ ಹಾಗೂ ಘನತೆಯ ವೇತನಕ್ಕಾಗಿ ಸಮಗ್ರ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಸಂಚಾಲಕ ಎಂ.ನಾರಾಯಣ್ ಮಾತನಾಡಿ, ಹೊರಗುತ್ತಿಗೆ ಪದ್ಧತಿಗೆ ಕಡಿವಾಣ ಹಾಕಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಯಾವುದೇ ಕಾರ್ಮಿಕರಿಗೆ ಅನ್ಯಾಯವಾಗಬಾರದು ಎಂದು ಹೇಳಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಉಪಾಧ್ಯಕ್ಷರಾದ ಎಂ.ಮಹದೇವಪ್ಪ, ಪಿ.ಶೇಖರಪ್ಪ ಇತರರಿದ್ದರು.