ನ್ಯೂಸ್

ಜನರ ಬಳಿಗೇ ಆಡಳಿತ; ಕಂದಾಯ ಆಯುಕ್ತಾಲಯ ಕಾರ್ಯಗತ

ಮೃತ್ಯುಂಜಯ ಕಪಗಲ್

ಬೆಂಗಳೂರು: ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯುವ ಪ್ರಯತ್ನದ ಮತ್ತೊಂದು ಹೆಜ್ಜೆಯಾಗಿ ಕಂದಾಯ ಅಯುಕ್ತಾಲಯ ಸ್ಥಾಪನೆಯಾಗಿದೆ. ರಾಜ್ಯ ಸರ್ಕಾರದ ಮಹತ್ವದ ನಿರ್ಣಯ ಮೂರು ವರ್ಷಗಳ ನಂತರ ಕಾರ್ಯಗತವಾಗಿದೆ.

ರಾಜ್ಯಮಟ್ಟದಲ್ಲಿ ಕಂದಾಯ ಆಯುಕ್ತಾಲಯ ಹಾಗೂ ಐಎಎಸ್ ದರ್ಜೆಯ ಆಯುಕ್ತ (ಕಂದಾಯ, ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ, ಹಾಗೂ ಸಾಮಾಜಿಕ ಭದ್ರತೆ)

ಹುದ್ದೆಯನ್ನು ಸೃಜಿಸಿ ಆದೇಶ ಹೊರಡಿಸಲಾಗಿದೆ.

ನಾಗರಿಕ ಸ್ನೇಹಿ ಆಡಳಿತ, ಕಂದಾಯ ಸೇವೆ ಬಯಸಿದ ಜನರಿಗೆ ಸ್ವಂದನೆ, ಅಧಿಕಾರ ವಿಕೇಂದ್ರೀಕರಣ ಹಾಗೂ ದಕ್ಷತೆ ಸಾಧಿಸುವುದು ನೂತನ ಆಯುಕ್ತಾಲಯದ ಉದ್ದೇಶವಾಗಿದೆ.

ಆಡಳಿತದ ಹಿತದೃಷ್ಟಿಯಿಂದ ಕೆಲಸದ ಪ್ರಕ್ರಿಯೆಗಳ ಸರಳೀಕರಣ, ಅಧಿಕಾರ ವಿಕೇಂದ್ರೀಕರಣ, ದಕ್ಷತೆ, ಕಂದಾಯ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆಯುಕ್ತಾಲಯ ಸ್ಥಾಪನೆ ಬಗ್ಗೆ 2019-20ರ ಬಜೆಟ್‌ನಲ್ಲಿ ಸರ್ಕಾರ ೋಷಿಸಿತ್ತು.

ರೂಪರೇಷೆ ಸಹಿತ ವರದಿ

ನಂತರ ಹಂತದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧ್ಯಯನ ನಡೆಸಿ, ರೂಪರೇಷೆ ಸಿದ್ಧಪಡಿಸಿ ವರದಿ ಸಲ್ಲಿಸಿತ್ತು. ಆಯುಕ್ತಾಲಯದ ವಿನ್ಯಾಸ, ಕಾರ್ಯವೈಖರಿ, ಸಿಬ್ಬಂದಿ ರಚನೆ ಮತ್ತು ಕೇಂದ್ರ ಸ್ಥಳದ ಕುರಿತು ಈ ರೂಪರೇಷೆಯಲ್ಲಿ ವಿವರಿಸಿದೆ.

ರಾಜ್ಯಾದ್ಯಂತ ಕಾರ್ಯನಿರ್ವಹಿಸಲು ಅಗತ್ಯವಿರುವ ಸಂಪನ್ಮೂಲ ಸಂಗ್ರಹ, ಸಿಬ್ಬಂದಿ ವ್ಯವಸ್ಥೆ ಹಾಗೂ ಯೋಜನೆಗಳ ಅನುಷ್ಠಾನಕ್ಕಾಗಿ ಕಂದಾಯ ಆಯುಕ್ತಾಲಯದ ಅಗತ್ಯವಿದೆ ಎಂದು ಸರ್ಕಾರ ತೀರ್ಮಾನಿಸಿತು.

ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗಾಗಿ ಕಾಲಮಿತಿಯೊಳಗೆ ಇಲಾಖೆ ಕೆಲಸ, ಕಾರ್ಯ ಪೂರ್ಣಗೊಳಿಸುವ ಅಗತ್ಯತೆ ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ವಿಲೀನ, ಸ್ಥಳಾಂತರ

ಕಂದಾಯ ಇಲಾಖೆ ವ್ಯಾಪ್ತಿಯ ಏಳು ಕಚೇರಿಗಳನ್ನು ಆಯುಕ್ತಾಲಯದಲ್ಲಿ ವಿಲೀನಗೊಳಿಸಿದ್ದು, ಅಗತ್ಯವಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಬಲವನ್ನು ಸ್ಥಳಾಂತರಿಸಲಾಗಿದೆ.

ಅಟಲ್‌ಜಿ ಜನಸ್ನೇಹಿ ನಿರ್ದೇಶನಾಲಯ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿದೇಶನಾಲಯ, ಭೂಮಿ ಉಸ್ತುವಾರಿ ಕೋಶ, ಕಂದಾಯ ವಿಶೇಷ ಕೋಶ, ಲೆಕ್ಕಪರಿಶೋಧನೆ ಶಾಖೆ ಮತ್ತು ಮನೆ ಬಾಡಿಗೆ ನಿಯಂತ್ರಕರ ಕಚೇರಿಗಳು ಕಂದಾಯ ಆಯುಕ್ತಾಲಯದಲ್ಲಿ ವಿಲೀನವಾಗಿವೆ.

ಜಾರಿ ದಳ (ಯುಪಿಒಆರ್) ವಿಭಾಗವು ನೇರವಾಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ನಿಯಂತ್ರಣಕ್ಕೆ ಒಳಪಟ್ಟಿದೆ. ಆದರೂ ದೈನಂದಿನ ಕಾರ್ಯಚಟುವಟಿಕೆಗಳು ಮತ್ತು ಕಾರ್ಯಾಚರಣೆಗಳನ್ನು ಕಂದಾಯ ಆಯುಕ್ತರು ಮೇಲ್ವಿಚಾರಣೆ ಮಾಡಲಿದ್ದಾರೆ.

ನಾಲ್ಕು ಪ್ರಾದೇಶಿಕ ಕಚೇರಿಗಳಲ್ಲಿ ಒಟ್ಟು 549 ಹುದ್ದೆಗಳಿವೆ. ಈ ಪೈಕಿ ತಲಾ ಮೂರು ಅಪರ ಪ್ರಾದೇಶಿಕ ಅಯುಕ್ತರು, ತಹಸೀಲ್ದಾರ್, ಒಬ್ಬ ಲೆಕ್ಕಾಧಿಕಾರಿ, ತಲಾ ನಾಲ್ಕು ಕಂದಾಯ ಲೆಕ್ಕಪರಿಶೋಧಕ, ಶಿರಸ್ತೇದಾರ್ ಸೇರಿ 30 ಹುದ್ದೆಗಳನ್ನು ಆಯುಕ್ತಾಲಯಕ್ಕೆ ಸ್ಥಳಾಂತರಿಸಲು ಪ್ರಸ್ತಾಪಿಸಲಾಗಿದೆ.

ಕಂದಾಯ ಭವನದಲ್ಲೇ ಸ್ಥಳಾವಕಾಶ

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಆಯುಕ್ತಾಲಯವು ಏಳು ವಿಭಾಗಗಳಲ್ಲಿ ಹಂಚಿಕೆ ಮಾಡಿದ ವಿಷಯಗಳನ್ನು ನಿರ್ವಹಿಸಲಿದೆ. ಆಡಳಿತ ಸಮನ್ವಯ ಮತ್ತು ಉಸ್ತುವಾರಿ, ಕಂದಾಯ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ, ಆನ್‌ಲೈನ್ ಸೇವಾ ವಿತರಣೆ, ಲೆಕ್ಕಾಚಾರ, ಲೆಕ್ಕಪರಿಶೋಧನೆ, ಆಯವ್ಯಯ, ಸಾಂಖ್ಯಿಕ ಮತ್ತು ಭೂಮಿ ಉಸ್ತುವಾರಿ ವಿಭಾಗಗಳ ಜವಾಬ್ದಾರಿ ನೀಡಲಾಗಿದೆ.

ಆಯುಕ್ತಾಲಯಕ್ಕೆ ಬೇಕಾದ ಎಲ್ಲ ಹುದ್ದೆಗಳನ್ನು ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳಿಂದ ಮರು ಸ್ಥಳ ನಿಯುಕ್ತಿ, ವಿಲೀನಗೊಳಿಸುವ ಮೂಲಕ ಭರ್ತಿ ಮಾಡಲಾಗುತ್ತಿದೆ.

ಕಂದಾಯ ಭವನದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿದೇಶನಾಲಯದ ಕಟ್ಟಡದಲ್ಲಿ ಲಭ್ಯ 12 ಸಾವಿರ ಚದರಡಿ ಜಾಗವನ್ನು ಆಯುಕ್ತಾಲಯಕ್ಕೆ ಗೊತ್ತುಪಡಿಸಿದ್ದು, ಐದು ಕೋಟಿ ರೂ. ಅನುದಾನ ಒದಗಿಸಲಾಗಿದೆ.