ಶಿವಮೊಗ್ಗ ಪ್ರಿಯದರ್ಶಿನಿ ಲೇಔಟ್‌ನಲ್ಲಿರುವ ಡಾ.ಎಸ್.ಪ್ರದೀಪ್ ಅವರ ಮನೆ. 
ನ್ಯೂಸ್

ಡಾ.ಎಸ್.ಪ್ರದೀಪ್ ಮನೆ ಮೇಲೆ ಲೋಕಾ ದಾಳಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವ ವಿದ್ಯಾಲಯದ ಸಾವಯವ ಕೃಷಿ ವಿಭಾಗದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಪ್ರದೀಪ್ ಅವರ ಮನೆ, ಕಚೇರಿ, ತೋಟದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಪ್ರದೀಪ್ ಅವರ ಶಿವಮೊಗ್ಗದ ಪ್ರಿಯದರ್ಶಿನಿ ಲೇಔಟ್ ಮೊದಲನೇ ಕ್ರಾಸ್‌ನಲ್ಲಿರುವ ಮನೆ, ಶಿಕಾರಿಪುರದ ಭದ್ರಾಪುರದಲ್ಲಿರುವ ನಾಲ್ಕು ಎಕರೆ ತೋಟ ಹಾಗೂ ಮನೆ, ಹೊಸನಗರ ತಾಲೂಕು ಕೆರೆಹಳ್ಳಿ ಹೋಬಳಿಯ ಕಾಳಶೆಟ್ಟಿ ಕೊಪ್ಪದ ತೋಟ ಹಾಗೂ ಮನೆ ಮತ್ತು ಅವರು ಕಾರ್ಯ ನಿರ್ವಹಿಸುತ್ತಿದ್ದ ಕಚೇರಿ ಮೇಲೆ ಲೋಕಾಯುಕ್ತ ತಂಡ ದಾಳಿ ಮಾಡಿದೆ. ದಾಳಿ ನಡೆದ ಸಂದರ್ಭದಲ್ಲಿ ಅವರು ಮನೆಯಲ್ಲೇ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ ಚೌದರಿ ನೇತತ್ವದಲ್ಲಿ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಆದಾಯಕ್ಕೂ ಮೀರಿದ ಸಂಪತ್ತು ಗಳಿಕೆಯ ಆರೋಪದ ಮೇರೆಗೆ ದಾಳಿ ನಡೆದಿದೆ. ಮೂರು ಕಡೆಗಳಲ್ಲಿ ಅಧಿಕಾರಿಗಳು, ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.