ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ( ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಜುಲೈ ತಿಂಗಳಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಪ್ರಯಾಣಿಕರಿಂದ 4.46 ಲಕ್ಷ ರೂ. ಮೊತ್ತದ ದಂಡದ ಹಣವನ್ನು ಸಂಗ್ರಹಿಸಲಾಗಿದೆ.
ಈ ಕುರಿತು ಹೇಳಿಕೆ ಬಿಗುಡುಗಡೆ ಮಾಡಿರುವ ಕೆಎಸ್‌ಆರ್‌ಟಿಸಿ, ಟಿಕೆಟ್ ಇಲ್ಲದೆ ಪ್ರಯಾಣಿಸುವವರನ್ನು ಪತ್ತೆ ಹಚ್ಚಲು ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಇದರಿಂದಾಗಿ ಜುಲೈ ತಿಂಗಳಿನಲ್ಲಿ 43,698 ವಾಹನಗಳನ್ನು ತನಿಖೆಗೊಳಪಡಿಸಿ 2,748 ಪ್ರಕರಣಗಳನ್ನು ಪತ್ತೆಹಚ್ಚಿ, 2832 ಟಿಕೆಟ್‌ರಹಿತ ಪ್ರಯಾಣಿಕರಿಂದ 4.46 ಲಕ್ಷ ರೂ. ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಜತೆಗೆ ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 63,914 ರೂ. ಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ತಪ್ಪಿತಸ್ಥರ ವಿರುದ್ದ ಇಲಾಖಾ ರೀತ್ಯಾ ಸೂಕ್ತ ಶಿಸ್ತಿನಕ್ರಮವನ್ನು ಜರುಗಿಸಲಾಗಿದೆ ಎಂದು ತಿಳಿಸಲಾಗಿದೆ.