ಸಾಂದರ್ಭಿಕ ಚಿತ್ರ 
ನ್ಯೂಸ್

ಹೆಚ್ಚುವರಿ 5 ನಿಮಿಷ ಕಳೆದಿದ್ದಕ್ಕೆ ದಂಡ; ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಘಟನೆ

ಬೆಂಗಳೂರು: ನಿಗದಿತ ಸಮಯಕ್ಕಿಂತ 5 ನಿಮಿಷ ಹೆಚ್ಚು ಹೊತ್ತು ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇದ್ದಿದ್ದಕ್ಕೆ ಯುವಕನೊಬ್ಬ ದಂಡ ಕಟ್ಟಿರುವ ಟನೆ ಇತ್ತೀಚೆಗೆ ನಡೆದಿದೆ. ಮೊಬೈಲ್​ನಲ್ಲಿ ಚಾರ್ಜ್​ ಮುಗಿದ ಕಾರಣ ವಿಜಯನಗರ ನಿಲ್ದಾಣದಲ್ಲಿ ಚಾರ್ಜ್​ ಹಾಕಿಕೊಂಡಿದ್ದ. ಬಳಿಕ ಪ್ರಯಾಣಕ್ಕೆ ಮುಂದಾದಾಗ ದಂಡ ಕಟ್ಟುವಂತೆ ಮೆಟ್ರೋ ಸಿಬ್ಬಂದಿಗಳು ಸೂಚಿಸಿದ್ದಾರೆ.

ಮಳೆ ಬರುತ್ತಿದ್ದು, ಚಾರ್ಜ್​ ಕಡಿಮೆ ಇದ್ದ ಕಾರಣ ಸ್ವಲ್ಪ ಹೊತ್ತು ಜಾರ್ಜ್​ ಮಾಡಿಕೊಂಡಿದ್ದೇನೆ ಎಂದರೂ ಸಿಬ್ಬಂದಿ ಮಾತ್ರ ದಂಡ ವಿಧಿಸಿದ್ದಾರೆ. ನಿಲ್ದಾಣದಲ್ಲಿ 20 ನಿಮಿಷವಷ್ಟೇ ಇರಲು ಅನುಮತಿ. ಕೇವಲ 1 ನಿಮಿಷ ಹೆಚ್ಚಾದರೂ ದಂಡ ಪಾವತಿಸಬೇಕು ಎಂದಿದ್ದಾರೆ. ಈ ಬಗ್ಗೆ ಯುವಕ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸದ್ಯ ಬಿಎಂಆರ್​ಸಿಲ್​ ಸಿಬ್ಬಂದಿ ನಡೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿಯಮ ಆರಂಭದಿಂದಲೂ ಇದೆ. ಟಿಕೆಟ್​ ಖರೀದಿಸಿ ನಿಲ್ದಾಣದಲ್ಲಿ ಸಮಯ ಕಳೆಯಬಾರದು ಎಂಬ ಕಾರಣಕ್ಕೆ ಈ ನಿಯಮ ಮಾಡಲಾಗಿದೆ ಎಂದು ಬಿಎಂಆರ್​ಸಿಲ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.