ನ್ಯೂಸ್

ಯಶವಂತಪುರ ಮೇಲ್ಸೇತುವೆಯಲ್ಲಿ ಸ್ಕೂಟರ್ ಗುದ್ದಿ ಪಾದಚಾರಿ ಸಾವು

ಬೆಂಗಳೂರು: ರಸ್ತೆ ದಾಟುತ್ತಿದ್ದ ಪಾದಾಚಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪಾದಾಚಾರಿ ಮೃತಪಟ್ಟಿದ್ದಾರೆ.

ಮತ್ತಿಕೆರೆ ನಿವಾಸಿ ಸೋಮಶೇಖರ ರಾವ್ (64) ಮೃತ ಪಾದಚಾರಿ. ಭಾನುವಾರ ರಾತ್ರಿ 9.15ರಲ್ಲಿ ಮನೆಗೆ ತೆರಳಲು ಯಶವಂತಪುರ ಮೇಲ್ಸೇತುವೆ ಡೌನ್ ರಾಂಪ್ ಬಳಿ ರಸ್ತೆ ದಾಟುವಾಗ ಅದೇ ಮಾರ್ಗದಲ್ಲಿ ವೇಗವಾಗಿ ಬಂದ ದ್ವಿಚಕ್ರ ವಾಹನ ಸೋಮಶೇಖರ ರಾವ್‌ಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪಾದಾಚಾರಿಯನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ದ್ವಿಚ್ರಕ ವಾಹನ ಸವಾರನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ದ್ವಿಚಕ್ರ ವಾಹನ ಸವಾರರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಯಶವಂತಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.