ನ್ಯೂಸ್

ಸಂತೃಪ್ತಿ ಇರದಿದ್ರೂ ಸಮಾಧಾನ; ತಜ್ಞ ಅಭಿಪ್ರಾಯ

Webdesk - Ravikanth
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಯವ್ಯಯದಲ್ಲಿ ಬೃಹತ್ ಪ್ರಮಾಣದಲ್ಲಿ ಕೈಗಾರಿಕೆಗಳಿಗೆ ನೆರವು ಇಲ್ಲದಿದ್ದರೂ ಸಮಾಧಾನ ಮಾಡುವಂತಹ ಬಜೆಟ್ ಆಗಿದೆ. ಒಂದಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ಕೈಗಾರಿಕೆಗಳನ್ನು ರಾಜ್ಯದ ಬೇರೆ ಬೇರೆ ಭಾಗಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿರುವುದು ಕಂಡು ಬರುತ್ತದೆ.

ತುಮಕೂರು ಹಾಗೂ ಹುಬ್ಬಳ್ಳಿಯಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇಲ್ಲಿಗೆ ಹೆಚ್ಚು ಉದ್ಯಮಿಗಳು ಬರಲು ಅನುಕೂಲವಾಗುತ್ತದೆ. ಈ ಭಾಗದ ಬೆಳವಣಿಗೆ ಆಗುತ್ತದೆ. ಹಿಂದೆಯೇ ಘೋಷಣೆಯಾಗಿರುವ ಧಾರವಾಡದ ಎಫ್​ಎಂಸಿಜಿ ಕ್ಲಸ್ಟರ್ ಸ್ಥಾಪನೆಯಾದರೆ ಸಾವಿರಾರು ಉದ್ಯೋಗಗಳು ನೇರವಾಗಿಯೇ ಸೃಷ್ಟಿಯಾದರೆ ಲಕ್ಷಾಂತರ ಉದ್ಯೋಗಗಳು ಪರೋಕ್ಷವಾಗಿ ಸೃಷ್ಟಿಯಾಗುತ್ತವೆ. ಚೆನ್ನೈ-ಬೆಂಗಳೂರು ಕಾರಿಡಾರ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೆ ಅದು ಹೊಸದೇನೂ ಅಲ್ಲ.

ಮಹಿಳಾ ಸ್ಟಾರ್ಟಪ್​ಗಳಿಗೆ ಆರ್ಥಿಕ ನೆರವು ನೀಡುವುದರಿಂದ ಹೂಡಿಕೆಗೆ ಅನುಕೂಲವಾಗುತ್ತದೆ. ರಾಯಚೂರು, ಕೊಪ್ಪಳ, ದಾವಣಗೆರೆಗಳಲ್ಲಿ ವಿಮಾನ ನಿಲ್ದಾಣ, ಕರಾವಳಿಯಲ್ಲಿ ಬಂದರುಗಳ ಅಭಿವೃದ್ಧಿ ಮಾಡುವುದರಿಂದ ಕೈಗಾರಿಕೆಗಳ ವಿಸ್ತರಣೆಗೆ ಅನುಕೂಲವಾಗುತ್ತದೆ. ಕೆಐಎಡಿಬಿ, ಕೆಎಸ್​ಎಸ್​ಐಡಿಸಿ ಕೈಗಾರಿಕಾ ನಿವೇಶನಗಳಲ್ಲಿ ಆರ್ಥಿಕ ದುರ್ಬಲರಿಗೆ ಆದ್ಯತೆಯ ಮೇರೆಗೆ ಕೈಗಾರಿಕಾ ಶೆಡ್​ಗಳನ್ನು ನೀಡುವುದು ಸ್ವಾಗತಾರ್ಹ ನಡೆಯಾಗಿದೆ. ಉದ್ಯಮಿಯಾಗು ಉದ್ಯೋಗ ನೀಡು ಎಂಬ ಘೋಷಣೆಗೆ ಇದು ಪೂರಕವಾಗಿರುತ್ತದೆ. ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ ಮಾಡಿ ಆ ಮೂಲಕ 10 ಸಾವಿರ ಜನರಿಗೆ ಉದ್ಯೋಗದ ಅವಕಾಶ ನೀಡುವುದಾಗಿ ಹೇಳಿರುವುದು ಒಳ್ಳೆಯದಾಗಿದೆ.

ಬಳ್ಳಾರಿ ಸೇರಿ ಕೆಲವೊಂದು ಕಡೆ ಜವಳಿ ಪಾರ್ಕ್, ಹಾವೇರಿ ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆಗಳ ಸ್ಥಾಪನೆ ಮಾಡುವುದು ಮುಖ್ಯಮಂತ್ರಿ ಅವರು ತವರು ಜಿಲ್ಲೆಗೆ ನೀಡುವ ಕೊಡುಗೆಯಾಗಿರುತ್ತದೆ. ಆಹಾರ ಪಾರ್ಕ್​ಗಳನ್ನು ಸ್ಥಾಪನೆ ಮಾಡುತ್ತಿರುವುದು ಒಳ್ಳೆಯದೇ ಆಗಿದ್ದರೂ ಉದ್ಯೋಗ ಗಳನ್ನು ಸ್ಥಾಪನೆ ಮಾಡಿದರೂ ಹೆಚ್ಚಿನ ಉದ್ಯೋಗದ ಅವಕಾಶಗಳೇನೂ ಇರುವುದಿಲ್ಲ.

ಹೊಸ ಹಾಲಿನ ಡೈರಿಗಳನ್ನು ಸ್ಥಾಪನೆ ಮಾಡುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದರಿಂದ ರೈತರಿಗೂ ಅನುಕೂಲವಾಗಿ ಜಿಲ್ಲೆಗಳಲ್ಲಿ ಹೂಡಿಕೆ ಬರುತ್ತದೆ. ಆರ್ಥಿಕ ಚಟುವಟಿಕೆಗಳು ನಡೆಯಲು ಸಹಕಾರಿಯಾಗುತ್ತದೆ. ಪ್ರವಾಸೋದ್ಯಮ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಮೊದಲಿನಿಂದ ಇರುವ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಆದ್ಯತೆ ನೀಡಿಲ್ಲ. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ವಿುಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವಿಮಾ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಾಮರ್ಥ್ಯ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ರೈಲು ಯೋಜನೆಗಳಿಗೆ ಆದ್ಯತೆ ನೀಡಿರುವುದು ಸಹ ಕೈಗಾರಿಕೆಗಳಿಗೆ ಪೂರಕವೇ ಆಗಿರುತ್ತದೆ. ಸಾರಿಗೆ ಸಂಸ್ಥೆಯನ್ನು ಉದ್ಯಮವನ್ನಾಗಿಯೇ ನಾವು ಪರಿಗಣಿಸಬೇಕು. ಅಲ್ಲಿಯೂ ಸುಧಾರಣೆಗೆ ಆದ್ಯತೆ ನೀಡುತ್ತಿರುವುದು ಉತ್ತಮವಾದ ನಡೆಯಾಗಿದೆ.