ನ್ಯೂಸ್

ಸಂಪಾದಕೀಯ: ಶಾಂತಿ, ಸೌಹಾರ್ದ ಅಗತ್ಯ

ಬಾಬುಪ್ರಸಾದ್​ ಮೋಡಿಸ್​

ಗಣೇಶ ಉತ್ಸವ ಸಾಮರಸ್ಯ, ಸದ್ಭಾವವನ್ನು ಹರಡುವ ಪರ್ವ. ಹಾಗಾಗಿಯೇ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಗಣೇಶೋತ್ಸವ, ವಿಘ್ನ ನಿವಾರಕನ ಆರಾಧನೆ ವ್ಯಾಪಕವಾಗಿ ವಿಸ್ತಾರವಾಗಿರುವುದು ಸಂಸ್ಕೃತಿಯ ಹೆಗ್ಗುರುತು. ಆದರೆ, ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದರಿಂದ ಉದ್ವಿಗ್ನ ಸ್ಥಿತಿ ನೆಲೆಸಿತ್ತು. ‘ಇದೊಂದು ಸಣ್ಣ ಘಟನೆ’ ಎಂಬಂತೆ ಸರ್ಕಾರದಲ್ಲಿರುವ ಕೆಲವರು ಪ್ರತಿಕ್ರಿಯಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಲ್ಲದೆ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರದ ಮೂಲಕ ಬಲಪ್ರಯೋಗ ಮಾಡಿರುವುದು ಸೂಕ್ತವಲ್ಲ. ಹೆಣ್ಣುಮಕ್ಕಳ ಮೇಲೆ ಕೂಡ ಲಾಠಿಯಿಂದ ಹಲ್ಲೆ ನಡೆಸಲಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ, ಮೆರವಣಿಗೆಯ ವೇಳೆ ಕಲ್ಲುತೂರಾಟದ ಘಟನೆಯನ್ನು ಖಂಡಿಸಿ ಮಂಗಳವಾರ ಕರೆ ನೀಡಲಾಗಿದ್ದ ಮದ್ದೂರು ಬಂದ್​ಗೆ ಉತ್ತಮ ಸ್ಪಂದನೆ ದೊರೆತಿದೆ.

ರಾಜ್ಯದಲ್ಲಿ ಇಂಥ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದು ಚಿಂತೆಯ ವಿಚಾರ. ಅಂದರೆ, ಸಮಾಜದ್ರೋಹಿ ವಿಧ್ವಂಸಕ ಶಕ್ತಿಗಳಿಗೆ ಈ ನೆಲದ ಕಾನೂನು ಮತ್ತು ವ್ಯವಸ್ಥೆಯ ಬಗ್ಗೆ ಯಾವುದೇ ಗೌರವ ಇಲ್ಲ, ಏನು ಮಾಡಿದರೂ ನಡೆಯುತ್ತದೆ ಎಂಬಂಥ ಸ್ಥಿತಿ ಸೃಷ್ಟಿಯಾಗಿರುವುದು ಮತ್ತು ಹಿಂದು ಧರ್ವಿುಯರನ್ನೇ ಗುರಿಯಾಗಿಸಿಕೊಂಡು ಪದೇಪದೆ ಕೃತ್ಯಗಳನ್ನು ಎಸಗುತ್ತಿರುವುದು ಸಮಾಜದ ಸೌಹಾರ್ದಕ್ಕೆ ನಿಜಕ್ಕೂ ಮಾರಕ. ಕಳೆದ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ನಾಗಮಂಗಲದಲ್ಲಿ ಗಲಭೆ ಸಂಭವಿಸಿತ್ತು. ಹೀಗಿರುವಾಗ ಈ ವರ್ಷ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದ್ದ ಸರ್ಕಾರ ಮತ್ತೆ ಎಡವಿರುವುದು ಸ್ಪಷ್ಟ.

ಸಮಾಜದಲ್ಲಿ ಶಾಂತಿ ಕದಡುವ, ಕೋಮು ಸಾಮರಸ್ಯವನ್ನು ಹಾಳುಗೆಡವುವ ಯಾವುದೇ ಕೃತ್ಯವನ್ನು, ಪ್ರಯತ್ನವನ್ನು ಸಹಿಸಿಕೊಳ್ಳಬಾರದು. ತಪ್ಪಿತಸ್ಥರು ಯಾರೇ ಆಗಿದ್ದರೂ, ಅಂಥವರ ವಿರುದ್ಧ ಕಾನೂನಿನ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಅಗತ್ಯ. ಮದ್ದೂರಿನಲ್ಲಿ ಸಂಭವಿಸಿದ ಅಹಿತಕರ ಘಟನೆಯ ಸಂಬಂಧ ರಾಜಕೀಯ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿರುವುದು ವಿಷಾದನೀಯ. ಸಮಾಜದಲ್ಲಿ ಮನಸ್ಸುಗಳನ್ನು ಒಡೆಯದೆ, ಬೆಸೆಯುವ ಕೆಲಸ ಆಗಬೇಕಿದೆ. ಹಿಂಸೆಯನ್ನು ಪ್ರಚೋದಿಸುವ, ಹರಡುವ ಪಟ್ಟಭದ್ರ ಹಿತಾಸಕ್ತಿಗಳು ಯಾರೇ ಆಗಿರಲಿ, ಅವರ ವಿರುದ್ಧ ಕ್ರಮ ಅಗತ್ಯ.

ಕರ್ನಾಟಕ ಶಾಂತಿಪ್ರಿಯ ರಾಜ್ಯ. ಈ ವರ್ಚಸ್ಸಿಗೆ ಧಕ್ಕೆ ಬರದಂತೆ ಕಾಳಜಿ ವಹಿಸಬೇಕಿದೆ. ಇಲ್ಲಿ ಎಲ್ಲ ಧರ್ಮ ಮತ್ತು ಮತದವರು ಸಾಮರಸ್ಯ, ಸದ್ಭಾವದಿಂದ ಬದುಕುತ್ತಿದ್ದಾರೆ. ಇದು ಈ ನೆಲದ ಗುಣ ಮತ್ತು ಸಂಸ್ಕೃತಿ. ಮೊಹರಂ ಆಚರಣೆಯಲ್ಲಿ ಹಿಂದುಗಳು ಪಾಲ್ಗೊಳ್ಳುವುದು, ಗಣೇಶ ಪೂಜೆಯಲ್ಲಿ ಮುಸ್ಲಿಮರು ಭಾಗವಹಿಸುವುದು ಸೌಹಾರ್ದದ ಸೊಗಸು. ಆದರೆ, ಒಂದಿಷ್ಟು ವಿಚ್ಛಿದ್ರಕಾರಿ ಶಕ್ತಿಗಳು ಈ ಸೌಹಾರ್ದಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಕೋಮುಗಲಭೆಯ ಪ್ರಯೋಗಶಾಲೆಯಾಗಲು ಬಿಡಬಾರದು.

ಈ ಹಿನ್ನೆಲೆಯಲ್ಲಿ ದ್ವೇಷ ಬಿತ್ತುವ ಪ್ರಯತ್ನಗಳನ್ನು ವಿಫಲಗೊಳಿಸಬೇಕು. ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು. ಮುಖ್ಯವಾಗಿ, ಇಂಥ ಅಹಿತಕರ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಮತಬ್ಯಾಂಕಿಗಾಗಿ ರಾಜಕೀಯ ಓಲೈಕೆ, ಸಮಾಜವಿರೋಧಿ ಕೃತ್ಯಗಳ ಸಮರ್ಥನೆ ನಿಲ್ಲಬೇಕು. ಮದ್ದೂರು ಘಟನೆಯ ಸಂಬಂಧ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ತನಿಖೆ ರ್ತಾಕ ಅಂತ್ಯ ಕಾಣಬೇಕು. ತಪ್ಪಿತಸ್ಥರು ಶಿಕ್ಷೆಯಿಂದ ಬಚಾವ್ ಆಗದಂತೆ ಕ್ರಮ ಕೈಗೊಂಡಲ್ಲಿ ವಿಧ್ವಂಸಕಾರಿ ಶಕ್ತಿಗಳಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ಸಮಾಜದಲ್ಲಿ ಶಾಂತಿ, ಸಾಮರಸ್ಯ ಕದಡುವ ಪ್ರಯತ್ನಗಳಿಗೆ ಕಡಿವಾಣ ಬೀಳುತ್ತದೆ. ಸೌಹಾರ್ದ ಮತ್ತು ಸಾಮರಸ್ಯಗಳೇ ಸಮಾಜದ ಶಕ್ತಿ. ಆಡಳಿತ ಪಕ್ಷ ಅಥವಾ ಪ್ರತಿಪಕ್ಷ ಯಾರೇ ಇರಲಿ ಈ ಶಕ್ತಿಯನ್ನು ವೃದ್ಧಿಸಲು ಶ್ರಮಿಸಬೇಕು.