ಪಿ ಸಿ ಶೇಖರ್ 
ನ್ಯೂಸ್

ವೆಬ್ ಸಿರೀಸ್‌ನತ್ತ ಪಿ.ಸಿ.ಶೇಖರ್ ಚಿತ್ತ : ಹೊಸ ವರ್ಷಕ್ಕೆ ರಿಲೀಸ್ ಆಗಲಿದೆ ‘ಜಸ್ಟ್ ಅಸ್’ ಸರಣಿ

ಪ್ರಮುಖ ಮುಖ್ಯಾಂಶಗಳು

  • ಮೊದಲ ಬಾರಿಗೆ ವೆಬ್ ಸರಣಿ ನಿರ್ದೇಶಿಸಿದ ರೋಮಿಯೊ ನಿರ್ದೇಶಕ
  • ಜಸ್ಟ್​ ಅಸ್​ ಎಂದು ಶೀರ್ಷಿಕೆ
  • ವಿಭಿನ್ನ ಪ್ರಯತ್ನಕ್ಕೆ ಮುಂದಾದ ಪಿಸಿ ಶೇಖರ್
ಬೆಂಗಳೂರು : ‘ರೋಮಿಯೋ’, ‘ರಾಗಾ’, ‘ಸ್ಟೈಲ್ ಕಿಂಗ್’ ಚಿತ್ರಗಳ ಖ್ಯಾತಿಯ ನಿರ್ದೇಶಕ ಪಿ.ಸಿ.ಶೇಖರ್ ಇದೀಗ ‘ಜಸ್ಟ್ ಅಸ್’ ಎಂಬ ವೆಬ್ ಸಿರೀಸ್ ನಿರ್ದೇಶಿಸುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮದುವೆಯ ಮುಂಚೆ ಹುಡುಗ ಮತ್ತು ಹುಡುಗಿಯ ನಡುವಿನ ಸಂಭಾಷಣೆಯ ವಿಚಾರಗಳನ್ನೇ ಇಟ್ಟುಕೊಂಡು ಶೇಖರ್ ಈ ಸಿರೀಸ್ ಮಾಡಿದ್ದಾರೆ. ಈ ಬಗ್ಗೆ, ‘ನಾನು ಈಗಾಗಲೇ ಸಿನಿಮಾ, ಕಿರುಚಿತ್ರ, ಡಾಕ್ಯುಮೆಂಟರಿ, ಅಲ್ಬಂ ಸಾಂಗ್ ಎಲ್ಲವನ್ನೂ ಮಾಡಿದ್ದೇನೆ. ಆದರೆ, ಇದುವರೆಗೆ ವೆಬ್‌ಸರಣಿ ಮಾಡಿರಲಿಲ್ಲ ಎಂಬ ಕೊರತೆ ಇತ್ತು. ಹಾಗಾಗಿ, ವೆಬ್ ಸಿರೀಸ್‌ಗೆ ಮುಂದಾದೆ. ಇಲ್ಲಿ ನಾನು ಸ್ವತಂತ್ರ. ನನ್ನೊಳಗೆ ಇರುವ ಆಲೋಚನೆಗಳನ್ನು ಯಾರ ಒತ್ತಡ ಇಲ್ಲದೆ ಸ್ವತಂತ್ರವಾಗಿ ನಿರೂಪಿಸಬಹುದು ಅಂತಲೇ ಈ ಸೃಜನಶೀಲ ಪ್ರಯತ್ನಕ್ಕೆ ಮುಂದಾದೆ. ‘ಜಸ್ಟ್ ಅಸ್’ನಲ್ಲಿ ಎಂಟು ಎಪಿಸೋಡ್‌ಗಳಿದ್ದು, ಮದುವೆಯ ವಿಚಾರಗಳ ಸುತ್ತ ನಿರೂಪಿತವಾಗಿದೆ. ಮೊದಲ ಬಾರಿಗೆ ಹುಡುಗ - ಹುಡುಗಿಯನ್ನು ನೋಡಲು ಹೋದಾಗ, ಇಬ್ಬರನ್ನೂ ಮಾತನಾಡಿ ಎಂದು ಕಳುಹಿಸುವುದುಂಟು. ಆದರೆ, ಆ ಮೊದಲ ಭೇಟಿಯಲ್ಲಿ ಇಬ್ಬರಿಗೂ ಹೇಗೆ ಮಾತು ಶುರು ಮಾಡಬೇಕು? ಏನು ಮಾತನಾಡಬೇಕು ಅಂತ ಗೊತ್ತಾಗುವುದಿಲ್ಲ. ಅದನ್ನು ಅವರಿಗೆ ಯಾರೂ ಹೇಳಿಕೊಡುವುದಿಲ್ಲ. ಹೀಗಾಗಿ, ನಾನು ಈ ವಿಚಾರದ ಬಗ್ಗೆ ಅಧ್ಯಯನ ಮಾಡಿ, ಆಪ್ತ ಸಮಾಲೋಚಕರ ಜತೆ ಚರ್ಚಿಸಿ, ಈ ಕಥೆ ಮಾಡಿದೆ. ಎಂಟು ಸಂಚಿಕೆಗಳಲ್ಲಿ ಹುಡುಗ-ಹುಡುಗಿ ಮಾತನಾಡಬಹುದಾದ ಎಂಟು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಎರಡು ದಿನದಲ್ಲಿ ಎಲ್ಲ ಶೂಟಿಂಗ್ ಪೂರ್ಣಗೊಳಿಸಿದ್ದೇವೆ. ಸರಣಿಯ ಮೊದಲ ಸಾಂಗ್ ಡಿ.22ಕ್ಕೆ ರಿಲೀಸ್ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು. ಮೈಸೂರಿನ ರಂಗ ಪ್ರತಿಭೆ ವಿವೇಕ್ ಮತ್ತು ಮೇಘಾ ಜಾದವ್ ಮುಖ್ಯಭೂಮಿಕೆಯಲ್ಲಿದ್ದಾರೆ. 2026ರ ಜ. 1ರಂದು ‘ಜಸ್ಟ್ ಅಸ್’ ಮೊದಲ ಸಂಚಿಕೆ ರಿಲೀಸ್ ಆಗಲಿದೆ.