ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುನಾಥ್ ಮಾತನಾಡಿದರು. ಎನ್.ಗೋಪಿನಾಥ್, ಎಂ.ಪಿ.ವೇಣುಗೋಪಾಲ್, ಸಿ.ವಿ.ಪ್ರಭಾ, ರಂಗಪ್ಪ, ಭೀಮೇಶ್, ಕೆ.ಸಿ.ಸುಖಿತಾ ಇದ್ದರು. 
ನ್ಯೂಸ್

ಕಾರ್ಮಿಕರಿಗೆ ಉಪಧನ ಪಾವತಿ ಕಡ್ಡಾಯ

ಶಿವಮೊಗ್ಗ: ಉದ್ಯೋಗದಾತರು ತಮ್ಮ ಕಾರ್ಮಿಕರಿಗೆ ಉಪಧನವನ್ನು ಕಡ್ಡಾಯವಾಗಿ ಪಾವತಿಸಬೇಕು. ಅದರಿಂದ ಭವಿಷ್ಯದಲ್ಲಿ ಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ಅನುಕೂಲವಾಗಲಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಮಂಗಳವಾರ ಕಾರ್ಮಿಕ ಇಲಾಖೆ ಮತ್ತು ಎಲ್‌ಐಸಿಯಿಂದ ಹೋಟೆಲ್ ಮಾಲೀಕರು, ಆಸ್ಪತ್ರೆ, ನರ್ಸಿಂಗ್ ಹೋಂ, ಖಾಸಗಿ ಶಿಕ್ಷಣ ಸಂಸ್ಥೆ, ಸಾರಿಗೆ ಮುಖ್ಯಸ್ಥರು, ವಿವಿಧ ಸಂಸ್ಥೆಗಳ ಮಾಲೀಕರಿಗೆ ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮಗಳು-2024 ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ವಿವಿಧ ಸಂಸ್ಥೆಗಳ ಮಾಲೀಕರು ಹೊಣೆಗಾರಿಕೆಯಿಂದ ಜಾರಿಗೆ ತರಬೇಕು. ವಾಣಿಜ್ಯೋದ್ಯಮಿಗಳು, ಉದ್ಯೋಗದಾತರು ಎಲ್ಐಸಿಗೆ ಕಾರ್ಮಿಕರ ಗ್ರಾಚ್ಯುಟಿ ತುಂಬಬೇಕು. ಇದರಿಂದ ಕಾರ್ಮಿಕರಿಗೆ ಹಲವು ರೀತಿ ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಂಗಪ್ಪ ಮಾತನಾಡಿ, ರಾಜ್ಯದಲ್ಲಿ ಉಪಧನ ವಿಮಾ ನಿಯಮಗಳನ್ನು ಅನುಷ್ಠಾನಗೊಳಿಸುವ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸಂತಸದ ವಿಚಾರ. ಎಲ್ಲ ಉದ್ಯೋಗದಾತರು, ಮಾಲೀಕರು ಈ ನಿಯಮಗಳನ್ನು ಜಾರಿಗೆ ತರಬೇಕು. ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಪಿ.ವೇಣುಗೋಪಾಲ್ ಮಾತನಾಡಿ, ಕಡ್ಡಾಯ ವಿಮೆಯನ್ನು ಜಾರಿಗೆ ತಂದಲ್ಲಿ ಉದ್ಯೋಗದಾತರ ಸಂಸ್ಥೆ ಯಾವುದೇ ಕಾರಣದಿಂದ ಮುಚ್ಚಿದಲ್ಲಿ, ಆರ್ಥಿಕ ನಷ್ಟ ಅನುಭವಿಸಿದರೆ ಅಥವಾ ದಿವಾಳಿಯಾದರೂ ಕಾರ್ಮಿಕ ಉಪಧನ ಸುರಕ್ಷಿತವಾಗಿಸಲು ಅವಕಾಶವಾಗುತ್ತದೆ. ಉದ್ಯೋಗದಾತರು ಕಾರ್ಮಿಕರ ಉಪಧನ ಪಾವತಿಸುವುದರಿಂದ ಹಲವು ಅನುಕೂಲಗಳಿವೆ ಎಂದರು.
ಮಂಗಳೂರು ಎಲ್ಐಸಿ ಪ್ರಾದೇಶಿಕ ವ್ಯವಸ್ಥಾಪಕ ಸಿ.ವಿ.ಪ್ರಭಾ ಮಾತನಾಡಿ, 10 ಜನ ಮತ್ತು ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿರುವ ಸಂಸ್ಥೆಯ ಮಾಲೀಕರು ಉಪಧನ ಪಾವತಿಸಬೇಕು. ಅರ್ಹ ಕಾರ್ಮಿಕ ಅಥವಾ ನೌಕರರಿಗೆ ಆಗುವ ಅನುಕೂಲಗಳು, ಮಾಲೀಕರಿಗೆ ಅಥವಾ ಆಡಳಿತ ವರ್ಗಕ್ಕೆ ಆಗುವ ಅನುಕೂಲಗಳು, ಉಪಧನ ಪಾವತಿಸುವಲ್ಲಿ ಮಾಲೀಕರ ಕರ್ತವ್ಯಗಳು, ನೌಕರರಿಗೆ ಆಗುವ ಅನುಕೂಲಗಳು, ನಿಯಂತ್ರಣಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಿದರು.
ಕಾರ್ಮಿಕ ನಿರೀಕ್ಷಕರಾದ ಭೀಮೇಶ್, ಕೆ.ಸಿ.ಸುಖಿತಾ, ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುನಾಥ್, ಎಲ್ಐಸಿ ಅಧಿಕಾರಿಗಳು, ವಿವಿಧ ಖಾಸಗಿ ಸಂಸ್ಥೆಗಳ ಮಾಲೀಕರು ಪಾಲ್ಗೊಂಡಿದ್ದರು.