ಮುಂಬೈ: ರಾಜಕೀಯ ದ್ವೇಷದ ಕಾರಣಕ್ಕೆ ನವದೆಹಲಿಯಲ್ಲಿರುವ ಶರದ್ ಪವಾರ್ ಅವರ ಅಧಿಕೃತ ನಿವಾಸದ ಸೆಕ್ಯುರಿಟಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಶುಕ್ರವಾರ ಆರೋಪಿಸಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪಕ್ಷದ ಮುಖ್ಯ ವಕ್ತಾರ, ಸಚಿವ ನವಾಬ್ ಮಲಿಕ್, ಇಂತಹ ನಡೆಯಿಂದ ಪಕ್ಷದ ನಾಯಕರನ್ನು ಹಿಮ್ಮೆಟ್ಟಿಸಲಾಗದು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ವಿರುದ್ಧದ ಹೋರಾಟವನ್ನು ಪಕ್ಷದ ನಾಯಕರು ಮುಂದುವರಿಸುತ್ತಾರೆ ಎಂದು ಹೇಳಿದರು.
ಪವಾರ್ ಅವರು ರಾಜ್ಯಸಭಾ ಸದಸ್ಯರು ಮತ್ತು ಮಾಜಿ ಸಚಿವರು. ಅವರಿಗೆ ರಾಷ್ಟ್ರ ರಾಜಧಾನಿಯಲ್ಲಿ ವೈ ಶ್ರೇಣಿಯ ಭದ್ರತೆ ಇತ್ತು. ಪವಾರ್ ಅವರ ನಿವಾಸ ದೆಹಲಿಯ 6 ಜನಪಥದಲ್ಲಿದ್ದು, ಅಲ್ಲಿಗೆ ನೀಡಲಾಗಿದ್ದ ಭದ್ರತೆಯನ್ನು ಜನವರಿ 20ರಂದು ಹಿಂಪಡೆಯಲಾಗಿದೆ. ಹೀಗೆ ಸೆಕ್ಯುರಿಟಿ ಹಿಂಪಡೆಯುವಾಗ ಯಾವುದೇ ರೀತಿಯ ಮುನ್ಸೂಚನೆ ನೀಡಿಲ್ಲ. ಹೀಗಾಗಿ ಇದು ರಾಜಕೀಯ ದ್ವೇಷದ ನಡೆ ಎಂದು ಮಲಿಕ್ ಟೀಕಿಸಿದರು.
ಮಹಾರಾಷ್ಟ್ರದಲ್ಲಿ ಪವಾರ್ ಅವರಿಗೆ z+ ಕೆಟಗರಿಯ ಭದ್ರತೆ ಇದೆ. ಶಿವಸೇನಾ ನೇತೃತ್ವದ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾಗಿ ಎನ್ಸಿಪಿ ಇಲ್ಲಿ ಅಧಿಕಾರದಲ್ಲಿದೆ. ಈ ಸರ್ಕಾರ ರಚನೆ ಆಗುವ ನಿಟ್ಟಿನಲ್ಲಿ ಪವಾರ್ ಮಹತ್ವದ ಪಾತ್ರ ನಿರ್ವಹಿಸಿದ್ದರು.(ಏಜೆನ್ಸೀಸ್)