ನ್ಯೂಸ್

ಸೋನಿಯಾ ಗಾಂಧಿ ಬದಲು ಶರದ್ ಪವಾರ್​ ನಾಯಕತ್ವ ವಹಿಸಲಿ: ಶಿವಸೇನಾ ನಾಯಕ ಸಂಜಯ್​ ರಾವುತ್​

ಮುಂಬೈ: ಕಾಂಗ್ರೆಸ್ ಪಕ್ಷದೊಳಗೆ ನಾಯಕತ್ವದ ಬಗ್ಗೆ ಅಸಮಾಧಾನ ಎದ್ದಿರುವುದು ಹಳೆಯ ವಿಚಾರವಾಯಿತು. ಇದೀಗ ಯುಪಿಎ ಮೈತ್ರಿಕೂಟದಲ್ಲೂ ಅಂಥದ್ದೊಂದು ಅಸಮಾಧಾನದ ಹೊಗೆ ಎದ್ದಿದೆ. ಶಿವಸೇನಾ ನಾಯಕ ಸಂಜಯ್ ರಾವುತ್ ಈ ವಿಚಾರವಾಗಿ ಮಾತನಾಡಿದ್ದು, ಸೋನಿಯಾ ಗಾಂಧಿ ಬದಲು ಶರದ್ ಪವಾರ್ ನಾಯಕತ್ವ ವಹಿಸಲಿ ಎಂದು ಹೇಳುವ ಮೂಲಕ ನೆಹರೂ-ಗಾಂಧಿ ಕುಟುಂಬದ ಪ್ರಭಾವ ಕುಸಿದಿದೆ ಎಂಬುದನ್ನು ಸೂಚ್ಯವಾಗಿ ಹೇಳಿತೋರಿಸಿದ್ದಾರೆ.

ಶರದ್ ಪವಾರ್ ಅವರಿಗೆ ರಾಜಕೀಯ ಮುತ್ಸದ್ದಿತನವೂ ಇದೆ. ವಿಶಾಲ ಅನುಭವ, ದೇಶ ಎದುರಿಸುತ್ತಿರುವ ಸವಾಲುಗಳ ಕುರಿತ ತಿಳಿವಳಿಕೆ ಅರಿವೂ ಇದೆ. ಅದೇ ರೀತಿ ದೇಶದ ಜನರ ನಾಡಿಮಿಡಿತವನ್ನೂ ಅವರು ಅರಿತುಕೊಂಡಿದ್ದಾರೆ. ದೇಶವನ್ನು ಮುನ್ನಡೆಸುವ ಶಕ್ತಿ ಸಾಮರ್ಥ್ಯಗಳು ಶರದ್​ ಪವಾರ್ ಅವರಿಗೆ ಇದೆ. ಶಿವಸೇನಾ ಅವರನ್ನು ಬೆಂಬಲಿಸುತ್ತದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

ಶರದ್ ಪವಾರ್ ಅವರು ಡಿಸೆಂಬರ್ 12ರಂದು 80ನೇ ಹುಟ್ಟುಹಬ್ಬ ಆಚರಿಸುತ್ತಿದ್ದು, ಅದಕ್ಕೂ ಪೂರ್ವಭಾವಿಯಾಗಿ ಸಂಜಯ್ ರಾವುತ್ ಈ ಮಾತನ್ನು ಹೇಳಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡುತ್ತಿದ್ದ ವೇಳೆ, ಯುಪಿಎ ಮೈತ್ರಿಕೂಟದಲ್ಲಿ ಸೋನಿಯಾ ಗಾಂಧಿ ನಾಯಕತ್ವದ ವಿಚಾರ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಸಂಜಯ್ ರಾವುತ್​, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಮುಂದೇನಾಗಲಿದೆ ಎಂಬುದು ಖಂಡಿತ ನಿಮಗೆ ಗೊತ್ತಿರಲ್ಲ ಎಂದು ಹೇಳಿದರು. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..