ನ್ಯೂಸ್

ಕರೊನಾ ಗೆದ್ದರು ಪವರ್​ ಸ್ಟಾರ್ ಪವನ್​ ಕಲ್ಯಾಣ್​

ಹೈದರಾಬಾದ್ : ಪವರ್​ ಸ್ಟಾರ್ ಎಂದೇ ಜನಪ್ರಿಯರಾಗಿರುವ ತೆಲುಗು ನಟ ಪವನ್​ ಕಲ್ಯಾಣ್​ ಅವರಿಗೆ ಇದೀಗ ಕರೊನಾ ನೆಗೆಟೀವ್ ಬಂದಿದೆ. ಅಲ್ಪಮಟ್ಟದ ಅಸ್ವಸ್ಥತೆಯನ್ನು ಇನ್ನೂ ಅನುಭವಿಸುತ್ತಿದ್ದರೂ, ಪೂರ್ಣ ಚೇತರಿಕೆ ಪಡೆಯುವ ಹಾದಿಯಲ್ಲಿದ್ದಾರೆ ಎಂದು ಅವರ ರಾಜಕೀಯ ಪಕ್ಷವಾದ ಜನಸೇನಾ ಹೇಳಿಕೆ ನೀಡಿದೆ.

ಏಪ್ರಿಲ್ ನಡುವಿನಲ್ಲಿ ತಮ್ಮ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದ ಬೆನ್ನಲ್ಲೇ ಪವನ್ ಕಲ್ಯಾಣ್​ ಅವರಿಗೂ ಕರೊನಾ ಪಾಸಿಟೀವ್ ಬಂದಿತ್ತು. ಕಲ್ಯಾಣ್​​ರ ಚಿಕಿತ್ಸೆಗೆ ವೈದ್ಯರ ತಂಡ ಮುಡಿಪಾಗಿತ್ತು. ಖಮ್ಮಂನ ಹೃದ್ರೋಗ ತಜ್ಞರಾದ ಡಾ.ಟಿ.ಸುಮನ್ ಅವರಿಗೆ ಚಿಕಿತ್ಸೆ ನೀಡಲು ಹೈದರಾಬಾದ್‌ಗೆ ಬಂದಿದ್ದರು. ಅಪೊಲೊ ಆಸ್ಪತ್ರೆಯ ವೈದ್ಯಕೀಯ ತಂಡ ಈ ಅವಧಿಯಲ್ಲಿ ಅವರ ಆರೋಗ್ಯ ಮೇಲ್ವಿಚಾರಣೆ ಮಾಡುತ್ತಿತ್ತು ಎನ್ನಲಾಗಿದೆ.

ಕಲ್ಯಾಣ್​​ರ ಸಹೋದರ ನಟ ಚಿರಂಜೀವಿ ಮತ್ತು ಸೋದರಳಿಯ ನಟ ರಾಮ್ ಚರಣ್ ಅವರ ಚಿಕಿತ್ಸೆಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿದರೆ, ನಿರ್ಮಾಪಕ ನಾಗ ವಂಶಿ ಅವರ ಆರೈಕೆ ಮಾಡಲು ಅವರೊಂದಿಗೆ ಉಳಿದುಕೊಂಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್)