ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿಗಳಲ್ಲಿ ಓರ್ವನಾದ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ತಿರಸ್ಕರಿಸಿದ್ದಾರೆ.
ನಿರ್ಭಯಾ ಅತ್ಯಾಚಾರ ಅಪರಾಧಿಗಳು ಕಾನೂನು ಪ್ರಕ್ರಿಯೆಗಳನ್ನು ಮುಂದಿಟ್ಟುಕೊಂಡು ತಮಗೆ ವಿಧಿಸಲಾದ ಮರಣದಂಡನೆಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ದೆಹಲಿ ಕೋರ್ಟ್ನ ಹಿಂದಿನ ಆದೇಶ ಸರಿಯಾಗಿ ಜಾರಿಯಾಗಿದ್ದರೆ ನಿನ್ನೆ (ಮಾ.3) ಮುಂಜಾನೆ 6ಗಂಟೆಗೆಲ್ಲ ನಾಲ್ವರೂ ಅಪರಾಧಿಗಳು ಗಲ್ಲಿಗೇರಬೇಕಿತ್ತು. ಆದರೆ ಮಾರ್ಚ್ 2ರಂದು ದೆಹಲಿ ಪಟಿಯಾಲಾ ಕೋರ್ಟ್ ಅಪರಾಧಿಗಳನ್ನು ಗಲ್ಲಿಗೇರಿಸಲು ತಡೆ ನೀಡಿತ್ತು.
ಅಪರಾಧಿ ಪವನ್ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಅದರ ಬೆನ್ನಲ್ಲೇ ಆತ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಕ್ಷಮೆ ಕೋರಿ ಅರ್ಜಿ ಸಲ್ಲಿಸಿದ್ದ. ತಾನು ರಾಷ್ಟ್ರಪತಿಯವರಿಗೆ ದಯಾ ಅರ್ಜಿ ಸಲ್ಲಿಸಿದ್ದು, ಅದು ಇತ್ಯರ್ಥ ಆಗುವವರೆಗೆ ಗಲ್ಲು ಶಿಕ್ಷೆಯನ್ನು ಮುಂದೂಡಬೇಕು ಎಂದು ದೆಹಲಿ ಪಟಿಯಾಲಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಇದರ ವಿಚಾರಣೆ ನಡೆಸುವ ಕಾರಣಕ್ಕೆ ಮಂಗಳವಾರ (ಮಾ.3ರಂದು)ನೇಣಿಗೇರಬೇಕಿದ್ದ ಅಪರಾಧಿಗಳ ಶಿಕ್ಷೆಯನ್ನು ಕೋರ್ಟ್ ಮುಂದೂಡಿತ್ತು.
ಉಳಿದ ಮೂವರು ಅಪರಾಧಿಗಳಾದ ವಿನಯ್, ಮುಕೇಶ್, ಅಕ್ಷಯ್ ಸಲ್ಲಿಸಿದ್ದ ದಯಾ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಈಗಾಗಲೇ ತಿರಸ್ಕರಿಸಿದ್ದಾರೆ. ಇನ್ನು ಹೊಸ ಡೆತ್ ವಾರೆಂಟ್ ಜಾರಿಯಾದ ಬಳಿಕವಷ್ಟೇ ಅಪರಾಧಿಗಳನ್ನು ಗಲ್ಲಿಗೇರಿಸಲು ಸಾಧ್ಯ. (ಏಜೆನ್ಸೀಸ್)