ನ್ಯೂಸ್

ಕೊಲೆ ಆರೋಪಿ ಪವಿತ್ರಾಗೆ ಜೈಲೇ ಗತಿ! ಮಗಳಿದ್ದಾಳೆ ಎಂಬ ಮನವಿಗೂ ಒಪ್ಪದ ಸುಪ್ರೀಂ ಕೋರ್ಟ್​ | Pavithra Gowda

ಮೋಹನ್​ ಶೆಟ್ಟಿ

Pavithra Gowda: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ದರ್ಶನ್ ಮತ್ತು ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಆರೋಪಿಗಳ ಜಾಮೀನನ್ನು ಇದೀಗ ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.

ದರ್ಶನ್ ಮತ್ತು ಪವಿತ್ರಾಗೆ ಹೈಕೋರ್ಟ್​ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಬಹಳ ಸೂಕ್ಷ್ಮವಾಗಿ ಹಾಗೂ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​, ತೀರ್ಪನ್ನು ಇಲ್ಲಿಯವರೆಗೆ ಕಾಯ್ದಿರಿಸಿತ್ತು. ಆದರೆ, ಇಂದು ತೀರ್ಪು ಪ್ರಕಟಿಸಿದ ನ್ಯಾ. ಜೆ.ಬಿ. ಪರ್ದಿವಾಲಾ, ಆರ್.ಮಹಾದೇವನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಎಲ್ಲ ಆರೋಪಿಗಳ ಜಾಮೀನನ್ನು ರದ್ದು ಮಾಡಿತು.

ತೀರ್ಪು ಹೊರಬೀಳುತ್ತಿದ್ದಂತೆ 'ಪವಿತ್ರಾ' ಕಣ್ಣೀರು

ಇನ್ನು ಕೋರ್ಟ್​ನಲ್ಲಿ ತೀರ್ಪು ತನ್ನ ವಿರುದ್ಧವಾಗಿ ಬರುತ್ತಿದ್ದಂತೆ ಕಣ್ಣೀರಿಟ್ಟ ಪವಿತ್ರಾ ಗೌಡ, ಮತ್ತೇ ಜೈಲಿಗೆ ಹೋಗಬೇಕು ಎಂಬ ಚಿಂತೆಯಲ್ಲಿ ತೊಡಗಿದ್ದಾರೆ. ತನ್ನ ಪರ ವಕೀಲರ ಮೂಲಕ ನ್ಯಾಯಾಲಯದಲ್ಲಿ ಮಾಡಿಕೊಂಡಿದ್ದ ವಿಶೇಷ ಮನವಿಗೂ ಕೋರ್ಟ್​ ಒಪ್ಪಲಿಲ್ಲ ಎಂಬ ದುಃಖ ಸದ್ಯ ಆರೋಪಿಗೆ ಕಾಡಿದೆ.

ಪವಿತ್ರಾ ಗೌಡ ಮಾಡಿಕೊಂಡಿದ್ದ ಮನವಿ ಏನು?

ಸುಪ್ರೀಂ ಕೋರ್ಟ್​ನಲ್ಲಿ ತನಗೆ ನೀಡಲಾದ ಜಾಮೀನನ್ನು ರದ್ದು ಮಾಡದಂತೆ ಮನವಿ ಸಲ್ಲಿಸಿದ್ದ ಪವಿತ್ರಾ ಗೌಡ, "ನನಗೊಬ್ಬಳು ಪುತ್ರಿಯಿದ್ದಾಳೆ. ಅವಳನ್ನು ನಾನು ನೋಡಿಕೊಳ್ಳಬೇಕು. ಈಗ ಬೇಲ್​ ರದ್ದು ಮಾಡಿದರೆ ನನಗೆ ತುಂಬ ತೊಂದರೆಯಾಗುತ್ತದೆ" ಎಂದು ಹೇಳಿದ್ದರು. ಈ ಬಗ್ಗೆ ಪವಿತ್ರಾ ಗೌಡ ಪರ ವಕೀಲರು ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಆದರೀಗ, ಅದ್ಯಾವುದಕ್ಕೂ ಒಪ್ಪದ ನ್ಯಾಯಾಲಯ, 6 ಆರೋಪಿಗಳೊಂದಿಗೆ ಪವಿತ್ರಾಳ ಜಾಮೀನನ್ನು ರದ್ದುಗೊಳಿಸಿದೆ. ಈ ಮೂಲಕ ಜೈಲಿನತ್ತ ಮುಖ ಮಾಡುವಂತೆ ತಿಳಿಸಿದೆ.

7 ತಿಂಗಳ ಬಳಿಕ ಮತ್ತೇ ಜೈಲಿಗೆ

2024ರ ಡಿಸೆಂಬರ್​ 13ರಂದು ದರ್ಶನ್​ ಮತ್ತು 7 ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಇದಾದ ಬಳಿಕ ಜೈಲಿನಿಂದ ಹೊರಬಂದಿದ್ದ ಆರೋಪಿಗಳು ವಿದೇಶ ಪ್ರಯಾಣ, ಸುತ್ತಾಟ, ಮೋಜು-ಮಸ್ತಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಕೋರ್ಟ್​, ಎಲ್ಲ 7 ಆರೋಪಿಗಳ ಜಾಮೀನು ರದ್ದುಗೊಳಿಸುವ ಮೂಲಕ ಮತ್ತೇ ಜೈಲುವಾಸ ಅನುಭವವನ್ನು ಮುಂದುವರಿಸುವಂತೆ ಸೂಚಿಸಿದೆ.