ನ್ಯೂಸ್

ಪಿತೃಭಕ್ತಿರಸಾಯನ

ಭಕ್ತಿ ಎಂದರೆ ನಿರತಿಶಯವಾದ ಪ್ರೀತಿ ಎಂದರ್ಥ. ತಂದೆ ತಾಯಿಗಳ ಮೇಲಿನ ಆ ಪ್ರೀತಿಗೆ ಪಿತೃ ಭಕ್ತಿ ಎಂದು ಕರೆಯುವರು. ತೈತ್ತರೀಯ ಉಪನಿಷತ್ತಿನ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋ ಭವ, ಅತಿಥಿದೇವೋಭವ ಎಂಬ ಮಂತ್ರ ತಂದೆ, ತಾಯಿ, ಆಚಾರ್ಯ ಮತ್ತು ಅತಿಥಿಗಳನ್ನು ಭೂಲೋಕದಲ್ಲಿ ಪ್ರತ್ಯಕ್ಷವಾಗಿ ತೋರುವ ದೇವರು ಎಂಬುದಾಗಿ ಉಪದೇಶಿಸಲಾಗಿದೆ.

ಇವರಲ್ಲಿ ತಂದೆ ತಾಯಿ ಪ್ರಮುಖರು. ತಾಯಿಯು ಜನನಿಯು, ಮಮತೆಯ ಮೂರ್ತಿಯು, ಅಂತೆಯೇ ‘ಮಾತ್ರಾ ಸಮಂ ನಾಸ್ತಿ ಶರೀರಪೋಷಣಮ್ ಅಂದರೆ ಶರೀರದ ಭರಣ ಪೋಷಣೆಗೆ ತಾಯಿಗೆ ಸರಿಸಮಾನರು ಯಾರೂ ಇಲ್ಲ. ಜಲಬಿಂದು ರೂಪದಿಂದ ಭೂಮಿಗೆ ಬಂದ ಜೀವಕ್ಕೆ ತಂದೆತಾಯಿಗಳೇ ಸಂಪೂರ್ಣ ಜೀವನದ ಆಧಾರವಾಗಿದ್ದಾರೆ. ಅವರಿಂದ ದೊರೆತ ಈ ಶರೀರವೇ ಸರ್ವಾರ್ಥಸಾಧನವಾದುದು.

ಅಂತೆಯೇ ಮಹಾಕವಿ ಕಾಳಿದಾಸನು ‘ಶರೀರಮಾದ್ಯಂ ಖಲು ಧರ್ಮಸಾಧನಮ್ ಎಂಬುದಾಗಿ ಹೇಳಿದ್ದಾನೆ. ಆದ್ದರಿಂದ ಧರ್ಮ,ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ಪ್ರಾಪ್ತಿಗೆ ಸಾಧನವಾದ ನಮ್ಮೆಲ್ಲರ ಶರೀರವು ನಮ್ಮ ನಮ್ಮ ತಂದೆ ತಾಯಿಗಳ ಅಪೂರ್ವವಾದ ಕೊಡುಗೆಯು. ಇಂತಹ ಕೊಡುಗೆಯನ್ನು ಅನುಗ್ರಹಿಸಿದ ತಂದೆ ತಾಯಿಗಳಿ ಬ್ಬರನ್ನೂ ಪ್ರತ್ಯಕ್ಷವಾಗಿ ತೋರುವ ದೇವರೆಂತಲೇ ಭಾವಿಸಿ ಅವರ ಮೇಲೆ ನಿರತಿಶಯವಾದ ಪ್ರೀತಿಯನ್ನಿಟ್ಟು ಅವರ ಸರ್ವಾಂಗೀಣ ಸೇವೆಯನ್ನು ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.

ನಮ್ಮ ದೇಶದ ಪಾಂಡುರಂಗನ ಪರಮಭಕ್ತನಾದ ಪುಂಡಲೀಕ ಮತ್ತು ಶ್ರವಣಕುಮಾರಾ ದಿಗಳು ಪಿತೃ ಭಕ್ತಿಗೆ ಪ್ರಸಿದ್ಧರಾದವರು. ಭಕ್ತಿಯಿಂದ ಮಾಡಿದ ಈ ಪಿತೃ ಸೇವೆಯಿಂದ ತಂದೆ ತಾಯಿಗಳು ಪ್ರಸನ್ನರಾಗಿರುವ ವರಲ್ಲದೇ ನಮ್ಮೆಲ್ಲರ ಮನಸ್ಸೂ ಸಹ ತೃಪ್ತಿ ಹಾಗೂ ಪ್ರಸನ್ನತೆಯನ್ನು ಪಡೆದುಕೊಳ್ಳುತ್ತದೆ. ಮನಸ್ಸಿನ ಪ್ರಸನ್ನತೆಯೇ ಆರೋಗ್ಯದ ಗುಟ್ಟಾಗಿ ರುತ್ತದೆ. ಮನಸ್ಸಿನ ಸ್ವಾಸ್ಥ್ಯವನ್ನು ಕೆಡಿಸಿಕೊಂಡು ರೋಗಿಗಳಾಗಿ ಸದಾ ಔಷಧದ ಸೇವನೆಯಲ್ಲಿಯೇ ಸಮಯವನ್ನು ಕಳೆಯುವುದಕ್ಕಿಂತಲೂ ತಂದೆ ತಾಯಿಗಳ ಸೇವೆಯನ್ನು ಮಾಡಿ ಸದಾ ಪ್ರಸನ್ನರಾಗಿದ್ದು ಸರ್ವರೂ ಸಹಜವಾಗಿ ಆರೋಗ್ಯವಂತ ರಾಗಿರಬೇಕೆಂಬ ಉದ್ದೇಶದಿಂದಲೇ ಚರಕ ಮಹರ್ಷಿಗಳು ಪಿತೃ ಭಕ್ತಿಯನ್ನು ಸಹ ಒಂದು ರಸಾಯನವನ್ನಾಗಿ ಉಪದೇಶ ಮಾಡಿದ್ದಾರೆ.