ನ್ಯೂಸ್

ಹೆಲ್ಮೆಟ್​ ಬಳಸಿಲ್ಲವೆಂದು ಕಾರು ಮಾಲೀಕನಿಗೆ ದಂಡ; ಚಲನ್​ ನೋಡಿ ಓನರ್​ಗೆ ಶಾಕ್​.. ಮುಂದೇನಾಯ್ತು ಗೊತ್ತಾ?

ಪಾಟ್ನಾ: ಬೈಕ್​ನಲ್ಲಿ ಓಡಾಡುವವರು ಯಾವೆಲ್ಲಾ ರೂಲ್ಸ್​ ಬ್ರೇಕ್​ ಮಾಡಿದ್ರೆ ದಂಡ ವಿಧಿಸಬಹುದು. ಹೆಲ್ಮೆಟ್​​ ಹಾಕದಿದ್ರೆ, ಒನ್​ವೇಯಲ್ಲಿ ಚಲಾಯಿಸಿದ್ರೆ, ತ್ರಿಬಲ್​​ ರೈಡಿಂಗ್​ ಮಾಡಿದ್ರೆ, ಸಿಗ್ನಲ್​ ಬ್ರೇಕ್​ ಮಾಡಿದ್ರೆ ಹೀಗೆ ಹಲವು ಕಾರಣಗಳಿಗೆ ಫೈನ್​ ಹಾಕುತ್ತಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್​ ಆಗಿದೆ. ಅದರಲ್ಲಿ ಕಾರು ಮಾಲೀಕನಿಗೆ ನೀವು ಹೆಲ್ಮೆಟ್ ಧರಿಸಿಲ್ಲ ಎಂದು ಹೇಳಿ ದಂಡ ವಿಧಿಸಿ ಚಲನ್​​ ಕಳುಹಿಸಿದ್ದಾರೆ. ಈ ಘಟನೆ ಬಿಹಾರದಲ್ಲಿ ನಡೆದಿದೆ. ಸಂಚಾರಿ ಪೊಲೀಸರು ಮತ್ಯಾವುದಕ್ಕೆಲ್ಲಾ ದಂಡ ವಿಧಿಸುತ್ತಾರೋ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ನಾನು ಒಂದು ವಾರದಿಂದ ಕಾರನ್ನು ಹೊರಗೆ ತೆಗೆದಿಲ್ಲ. ನನಗೆ ಹೆಲ್ಮೆಟ್​​ ಧರಿಸಿಲ್ಲ ಎಂದು ದಂಡ ವಿಧಿಸಿ ಚಲನ್​ ಕಳುಹಿಸಿದ್ದಾರೆ. ಫೋನ್​ನಲ್ಲಿ ಮೆಸೇಜ್​ ಬಂದಾಗಿನಿಂದ ಆನ್​ಲೈನ್​ನಲ್ಲಿ ಚಲನ್​ ಅನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇನೆ. ಸಮಸ್ಯೆ ಪರಿಹರಿಸಲು ಮಾಡುತ್ತಿರುವ ಪ್ರಯತ್ನಕ್ಕೆಲ್ಲಾ ಆನ್​ಲೈನ್​ನಲ್ಲಿ ಒಂದಲ್ಲ ಒಂದು ತೊಡುಕು ಎದುರಾಗುತ್ತಿದೆ ಎಂದು ಸಂತ್ರಸ್ತರು ಹೇಳಿದರು.

ಅಸಲಿಗೆ, ಬಿಹಾರದ ಬೇಗಂಪುರನ ಪೋಖಾರಾ ನಿವಾಸಿಯಾಗಿರುವ ಗೌರವ್​ ಕುಮಾರ್​ ಎಂಬುವವರಿಗೆ ಶನಿವಾರ (ಆಗಸ್ಟ್​​ 31) ಸಂಜೆ 5:30ಕ್ಕೆ ಪಾಟ್ನಾ ಟ್ರಾಫಿಕ್ ಪೊಲೀಸರಿಂದ ಮೆಸೇಜ್​​ ಬಂದಿದೆ. ಅದರಲ್ಲಿ ಹೆಲ್ಮೆಟ್ ಹಾಕದೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ. ಕಳೆದ ಏಳು ದಿನಗಳಿಂದ ಕಾರನ್ನು ಬಳಸಲೆ ಇಲ್ಲ. ಜತೆಗೆ ಕಾರು ಚಲಾಯಿಸಿದರ ಹೆಲ್ಮೆಟ್​ ಬಳಸಿಲ್ಲ ಎಂದು ಫೈನ್​ ಹಾಕಿದ್ದಾರೆ ಎಂದು ಅವರಿಗೆ ಆಶ್ಚರ್ಯವಾಗಿದೆ. ಸುತ್ತಮುತ್ತಲಿನವರು ಇದನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡಿದ್ದಾರೆ.

ಬಳಿಕ ಹೆಚ್ಚಿನ ಮಾಹಿತಿಯನ್ನು ಕಂಡುಕೊಂಡ ಬಳಿಕ ಗೌರವ್​ ಕುಮಾರ್​ ಅವರಿಗೆ ಅಸಲಿ ಸಂಗತಿ ತಿಳಿದಿದೆ.ಚಲನ್​ನಲ್ಲಿ ಯುವ ಜೋಡಿಯು ಮೋಟರ್‌ಸೈಕಲ್‌ನಲ್ಲಿ ಹೋಗುತ್ತಿರುವ ಫೋಟೋ ಇದೆ. BR 01 EV2598 ಎಂಬ ಬೈಕ್​​​ನ ನಂಬರ್​ ಪ್ಲೇಟ್​​​ ಹಾಗೂ ಕುಮಾರ್​ ಅವರ ಕಾರಿನ ನಂಬರ್​ ಪ್ಲೇಟ್​ BR 01 FV 2598 ನಡುವೆ ಒಂದೇ ಒಂದು ಅಕ್ಷರದ ವ್ಯತ್ಯಾಸವಿದೆ. ಬೈಕ್​ನವರಿಗೆ ಕಳುಹಿಸಬೇಕಾದ ಚಲನ್​ ಅನ್ನು ಟ್ರಾಫಿಕ್​ ಸಿಬ್ಬಂದಿ ತನಗೆ ಕಳುಹಿಸಿದ್ದಾರೆ ಎಂದು ಅರಿವಾಗಿದೆ. ಈ ತಪ್ಪನ್ನು ಸರಿಪಡಿಸಲು ಆನ್​ಲೈನ್​ನಲ್ಲಿ ದೂರ ನೀಡಿದರೂ ಅಧಿಕಾರಿಗಳಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಗೌರವ್​ ಹೇಳಿದರು. (ಎಜೆನ್ಸೀಸ್​​)