ಸೊರಬ: ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಬಾರದೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ರೋಗಿಗಳು ಸಂಕಷ್ಟ ಎದುರಿಸುವಂತಾಗಿದೆ ಎಂದು ಬಿಜೆಪಿ ಮುಖಂಡ ಡಾ. ಜ್ಞಾನೇಶ್ ದೂರಿದರು.
ಆಸ್ಪತ್ರೆಯ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ವೈದ್ಯರು ಸರಿಯಾದ ಸಮಯಕ್ಕೆ ಬಾರದೆ ಕೇವಲ ವೇತನ ಪಡೆಯಲು ಮಾತ್ರ ಸೀಮಿತರಾಗಿದ್ದಾರೆ. ಸರ್ಕಾರಿ ಆಸ್ಪತ್ರೆ ಬೇರೆ ಕಡೆಗೆ ರೆಫರೆನ್ಸ್ ಮಾಡುವ ಕೇಂದ್ರವಾಗಿದೆ. ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ತೆರೆದು ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ರೋಗಿಗಳು ಬೇರೆ ತಾಲೂಕುಗಳಿಗೆ ಚಿಕಿತ್ಸೆಗೆ ಹೋಗುವಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಚಿವ ಮಧು ಬಂಗಾರಪ್ಪ ಒಮ್ಮೆಯೂ ಆಸ್ಪತ್ರೆಯನ್ನು ಪರಿಶೀಲಿಸಿಲ್ಲ. ಸರ್ಕಾರಿ ಹಣ ಪೋಲು ಮಾಡುವುದಾದರೆ ಆಸ್ಪತ್ರೆಯನ್ನು ಮುಚ್ಚಿ ಬಿಡಿ. ರೋಗಿಗಳನ್ನು ಕರೆತರಲು ಸರಿಯಾದ ಆಂಬುಲೆನ್ಸ್, ಅಲ್ಟ್ರಾಸೌಂಡ್ ಮತ್ತಿತರ ಉಪಕರಣಗಳಿಲ್ಲ. ಈ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ವ್ಯವಸ್ಥೆ ಸರಿಯಾಗಿಲ್ಲ. ಆಸ್ಪತ್ರೆಯ ವೈದ್ಯ ಸಿಬ್ಬಂದಿ ರೋಗಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ರಾತ್ರಿ ಪಾಳಿಯಲ್ಲಿ ವೈದ್ಯರು ಇರುವುದಿಲ್ಲ ಎಂಬ ಆರೋಪಗಳಿವೆ. ಅವ್ಯವಸ್ಥೆ ಸರಿಯಾಗದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಪ್ರಭು, ಬಸವರಾಜ್, ಸಂದೀಪ್, ಸತೀಶ್ ಗೌಡ, ತುಕಾರಾಮ, ಮಂಜಣ್ಣ, ಚಂದ್ರಣ್ಣ, ಮಹಾಬಲೇಶ್ವರ, ವಿನಯ್ ಶೆರ್ವಿ, ಹರೀಶ್, ಗುರುಪ್ರಸನ್ನ ಗೌಡ, ಕಲ್ಪನಾ, ನಾಗರಾಜ್, ದೇವರಾಜ್, ವಿಶ್ವನಾಥ್ ಇತರರಿದ್ದರು.