ವಾಷಿಂಗ್ಟನ್ ಡಿಸಿ: ಅಮೆರಿಕ ಮೂಲದ ವೈದ್ಯರೊಬ್ಬರು ಬೇಯಿಸದ ಅಥವಾ ಅರ್ಧ ಬೇಯಿಸಿದ ಹಂದಿಮಾಂಸವನ್ನು ಸೇವಿಸುವುದರಿಂದ ಉಂಟಾಗುವ ಅಪಾಯವನ್ನು ತಿಳಿಸಿದ್ದಾರೆ. ಯುನಿವರ್ಸಿಟಿ ಆಫ್ ಫ್ಲೋರಿಡಾ ಹೆಲ್ತ್ ಜಾಕ್ಸನ್ವಿಲ್ಲೆಯ ಡಾ.ಸ್ಯಾಮ್ಘಾಲಿ ಅವರು ವೈದ್ಯಕೀಯ ತುರ್ತುಸ್ಥಿತಿ ಹಾಗೂ ರೋಗಗಳ ಬಗೆ ಎಲ್ಲರಿಗೂ ತಿಳಿದಿರಲಿ ಎಂಬ ಕಾರಣಕ್ಕೆ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ ಡಾ.ಘಾಲಿ ಸೋಂಕಿನಿಂದ ಬಳಲುತ್ತಿರುವ ರೋಗಿಯೊಬ್ಬರ ಸಿಟಿ ಸ್ಕ್ಯಾನ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವ್ಯಕ್ತಿಯು ಪೋರ್ಕ್ ಟೇಪ್ವರ್ಮ್ನ ಲಾರ್ವಾ ಸಿಸ್ಟ್ಗಳಿಂದ ನರಳುತ್ತಿದ್ದಾನೆ. ಇದರ ವೈಜ್ಞಾನಿಕ ಹೆಸರು ಟೇನಿಯಾ ಸೋಲಿಯಮ್ ಎಂದು ವಿವರಿಸಿದ್ದಾರೆ. ಇದು ಬೇಯಿಸದ ಹಂದಿಮಾಂಸದಲ್ಲಿ ಕಂಡುಬರುವ ಸೋಂಕಾಗಿದೆ. ಇದನ್ನು ಸೇವಿಸುವ ಮೂಲಕ ಮನುಷ್ಯರು T. Solium ಸೋಂಕಿಗೆ ಒಳಗಾಗುತ್ತಾರೆ ಎಂದು ವಿವರಿಸಿದ್ದಾರೆ.
ಇದನ್ನು ಸೇವಿಸಿದ 5 ರಿಂದ 12 ವಾರಗಳ ನಂತರ ಈ ಸೋಂಕು ಜೀರ್ಣಾಂಗವ್ಯೂಹದೊಳಗೆ ಪ್ರೌಢವಸ್ಥೆಯ ಟೇಪ್ವರ್ಮ್ಗಳಾಗಿ ವಿಕಸನಗೊಳ್ಳುತ್ತವೆ. ಇದನ್ನು ಕರುಳಿನ ಟೇನಿಯಾಸಿಸ್ ಎಂದು ಕರೆಯಲಾಗುತ್ತದೆ. ಕೆಲವರಲ್ಲಿ ಇದು ಮೆದುಳಿಗೆ ಸಾಗಿ ಮೆದುಳಿನ ಅಂಗಾಂಶದಲ್ಲಿ ಟೇಪ್ವರ್ಮ್ ಅನ್ನು ರಚಿಸುತ್ತದೆ. ಇದರಿಂದ ತಲೆನೋವು ಸೇರಿ ಗಂಭೀರ ನರಕ್ಕೆ ಸಂಬಂಧಿಸಿದ ಕಾಯಿಲೆಗಳು ಬರಬಹುದು ಎಂದು ತಿಳಿಸಿದ್ದಾರೆ.
ಇಂತಹ ಸಮಸ್ಯೆಗಳಿಂದ ಪಾರಾಗಲು ಪದೇಪದೆ ಕೈತೊಳೆದುಕೊಳ್ಳುವ ಮೂಲಕ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮುಖ್ಯವಾಗಿ ಬೇಯಿಸದ ಅಥವಾ ಕಚ್ಚಾ ಪೋರ್ಕ್ ಮಾಂಸವನ್ನು ಎಂದಿಗೂ ಸೇವಿಸಬೇಡಿ ಎಂದು ಡಾ.ಘಾಲಿ ಸಲಹೆ ನೀಡಿದ್ದಾರೆ. ರೋಗದ ಬಗ್ಗೆ ಮಾಹಿತಿ ಮತ್ತು ಸಲಹೆ ನೀಡುವುದರ ಜತೆಗೆ ಅದನ್ನು ಗುಣಪಡಿಸಲು ಇರುವ ಚಿಕಿತ್ಸೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಈ ರೋಗಕ್ಕೆ ಆಂಟಿ ಪಾರಾಸಿಟಿಕ್ ಥೆರಪಿ, ಸ್ಟೀರಾಯ್ಡ್‌ಗಳು, ಆಂಟಿ-ಎಪಿಲೆಪ್ಟಿಕ್ಸ್ (ನ್ಯೂರೋಸಿಸ್ಟಿಸರ್ಕೋಸಿಸ್) ಈ ಚಿಕಿತ್ಸೆಗಳನ್ನು ಪಡೆಯಬಹುದು ಎಂದು ತಿಳಿಸಿದರು. ಡಾ.ಸ್ಯಾಮ್ ಘಾಲಿ ಅವರ ಈ ಪೋಸ್ಟ್ ಅನ್ನು 6 ಮಿಲಿಯನ್ ಮಂದಿ ವೀಕ್ಷಿಸಿದ್ದು, 1600ಕ್ಕೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)