ಬೆಂಗಳೂರು: ಆಧುನಿಕ ವೈದ್ಯಕೀಯವು ಆಯುರ್ವೇದ, ಯೋಗದ ಸಮಾಗಮವಿದ್ದಂತೆ. ಸಮಗ್ರ ವೈದ್ಯಕೀಯ ಪದ್ಧತಿಯಡಿ ರೋಗಿಗಳ ಆರೈಕೆಯಲ್ಲಿ ನಗರದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು ಮುಂಚೂಣಿಯಲ್ಲಿದೆ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ.ವೈ.ಸಿ. ಜನಾರ್ದನ ರೆಡ್ಡಿ ಹೇಳಿದ್ದಾರೆ.
ನಿಮ್ಹಾನ್ಸ್ ಹಾಗೂ ಸಮಗ್ರ ವೈದ್ಯಕೀಯ ವಿಭಾಗದ ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯೋಗ ಮತ್ತು ಆಯುರ್ವೇದ ಕುರಿತ ಯಂತ್ರ-2026 ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಖಿನ್ನತೆ, ಐಚ್ಛಿತ ವಿಕಲತೆ (ಸ್ಕಿಜೋಫ್ರೇನಿಯಾ), ಪಾರ್ಶ್ವವಾಯು, ಪಾರ್ಕಿನ್ಸನ್, ನರಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸಮಗ್ರ ಚಿಕಿತ್ಸಾ ಪದ್ಧತಿಯು ವರದಾನವಾಗಿದೆ. ಸಮಗ್ರ ಆರೋಗ್ಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ರೋಗಿಗಳಿಗೆ ಅತ್ಯುತ್ತಮ ಆರೈಕೆ ಒದಗಿಸಲಾಗುತ್ತಿದೆ ಎಂದರು.
ಇಂಟಿಗ್ರೇಟಿವ್ ಮೆಡಿಸಿನ್ ವಿಭಾಗವು 2019ರಲ್ಲಿ ಆರಂಭಗೊಂಡಿದ್ದು, ಆಯುರ್ವೇದ, ಯೋಗ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಮೂಲಕ ವಾದರಿಯಾಗಿದೆ. ಆಧುನಿಕ ವೈದ್ಯಕೀಯ ಪದ್ಧತಿಯೊಂದಿಗೆ ಸಂಶೋಧಿಸಲಾದ ಪರ್ಯಾಯ ವೈದ್ಯಕೀಯ ವಿಧಾನಗಳನ್ನು ಯಶಸ್ವಿಯಾಗಿ ಸಂಯೋಜಿಸಲಾಗುತ್ತಿದೆ ಎಂದರು.
ರಾಜ್ಯ ಆಯುಷ್ ಆಯುಕ್ತ ಸುನೀಲ್ ಪನ್ವಾರ್ ಮಾತನಾಡಿ, ಯೋಗ ಮತ್ತು ಆಯುರ್ವೇದಗಳನ್ನು ನರವಿಜ್ಞಾನ ವಿಭಾಗದಲ್ಲಿ ಸಂಯೋಜಿಸುವುದರಿಂದ ಉತ್ತಮ ಪ್ರಗತಿಯನ್ನು ಸಾಧಿಸಬಹುದು. ಇದು ರೋಗಿಗಳಿಗೆ ಸಹಾಯವಾಗಲಿದೆ ಎಂದು ಹೇಳಿದರು.
ಮಾನಸಿಕ ಅಸ್ವಸ್ಥತೆಗಳನ್ನು ಪತ್ತೆಹಚ್ಚಿದಾಗ ಗ್ರಹಿಕೆಗೆ ಒಳಗಾದ ವಿಷಯಗಳು ಇವೆ. ಇದಕ್ಕೆ ಚಿಕಿತ್ಸೆ ನೀಡುವುದು ಕಷ್ಟಸಾಧ್ಯ. ‘ನನಗೆ ಇಂತಹ ಅಸ್ವಸ್ಥತೆಗಳಿವೆ’ ಎಂದು ರೋಗಿ ಒಪ್ಪಿಕೊಳ್ಳುವುದು ಕಷ್ಟ. ಅಂತಹವರಿಗೆ ತಿಳಿಹೇಳಿ ಚಿಕಿತ್ಸೆಗೆ ಒಳಪಡಿಸುವ ಕೆಲಸ ಆಗಬೇಕಿದ್ದು, ಇದರ ಯಶಸ್ಸಿಗೆ ನಾನು ಅಂಬಾಸಿಡರ್ ಆಗಿರುತ್ತೇನೆ. ವಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ನಾಚಿಕೆಪಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.
ನಿಮ್ಹಾನ್ಸ್ ಕುಲಪತಿ ಡಾ.ಡಿ. ನಾಗರಾಜ, ರಿಜಿಸ್ಟ್ರಾರ್ ಡಾ.ಎ.ಎಚ್.ಹರ್ಷ , ಸಮಗ್ರ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಕಿಶೋರ್ಕುವಾರ್, ಅಯುಷ್ ಸಂಶೋಧಕ ಪ್ರೊ. ಪಟವರ್ಧನ್, ವಿಜ್ಞಾನಿ ಡಾ.ಬಿ.ಎನ್. ಗಂಗಾಧರ್, ಸಂಯೋಜಕ ಡಾ.ತ್ರಿಶಾಲ್ ರಾವ್, ವರ್ಲ್ಡ್ ಆಯುರ್ವೇದ ಫೌಂಡೇಶನ್ ಟ್ರಸ್ಟಿ ರಂಜಿತ್ ಪುರಾಣಿಕ್ ಉಪಸ್ಥಿತರಿದ್ದರು.
ರೋಗಿಗಳಿಗೆ ಪ್ರಯೋಜನ
ಸಮಗ್ರ ವೈದ್ಯಕೀಯ ವಾದರಿಯಲ್ಲಿ ಕ್ಲಿನಿಕಲ್ ಕೇರ್ ಪ್ರಮುಖ ಹಂತವಾಗಿದೆ. 2024-2025ರಲ್ಲಿ ಯೋಗ ಸೇವೆಗಳ ಮೂಲಕ ಸುವಾರು 30 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಟೆಲಿಯೋಗ (ದೂರಸಂಪರ್ಕ ಯೋಗ) ಸೇವೆಗಳ ಮೂಲಕ ಪ್ರತಿವಷರ್ 10 ಸಾವಿರಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 2019ರಿಂದ ಇಲ್ಲಿಯವರೆಗೆ ನೇರ ಹಾಗೂ ಟೆಲಿಯೋಗ ಸೇವೆಗಳ ಲಾಭವನ್ನು ಲಕ್ಷಕ್ಕೂ ಅಧಿಕ ರೋಗಿಗಳು ಪಡೆದುಕೊಂಡಿದ್ದಾರೆ ಎಂದು ಡಾ.ವೈ.ಸಿ. ಜನಾರ್ದನ ರೆಡ್ಡಿ ತಿಳಿಸಿದರು.
ಗಣ್ಯರಿಂದ ಸಂದೇಶ
ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡ, ಎನ್ಐಟಿಐ ಸದಸ್ಯ ಡಾ.ಎಂ.ಶ್ರೀನಿವಾಸ್, ಆಯುಷ್ ಇಲಾಖೆ ಕಾರ್ಯದರ್ಶಿ ರಾಜೇಶ್ ಕೋಟೆಚಾ ದೆಹಲಿಯಿಂದಲೇ ವೆಬಿನರ್ ಮೂಲಕ ಸಮ್ಮೇಳನ ಸಂದೇಶ ನೀಡಿದರು.