ನ್ಯೂಸ್

ಭಗವದ್ ಸಾಕ್ಷಾತ್ಕಾರಕ್ಕೆ ಮಾರ್ಗಗಳು

Webdesk - Mallikarjun K R
 ಭಗವದ್ ಸಾಕ್ಷಾತ್ಕಾರ ಪದದ ಅರ್ಥವೇ ಹಲವರಿಗೆ ತಿಳಿದಿಲ್ಲವೆನಿಸುತ್ತದೆ. ಕಾರಣ, ಸಾಮಾನ್ಯ ಜನರು ಭಗವಂತ ಎಂದರೆ ಮತ್ತೊಂದು ಬಗೆಯ ಎಟಿಎಂ ಯಂತ್ರ ಎಂದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ವೈಚಾರಿಕವಾಗಿಯೂ ಈ ಅಂಶವನ್ನು ಅರಿಯಲು ಪ್ರಯತ್ನಿಸಬೇಕು. ದೇವಾಲಯಕ್ಕೆ ಭೇಟಿ ನೀಡಿದಾಕ್ಷಣ ಅಂದುಕೊಂಡಿದ್ದೆಲ್ಲಾ ನೆರವೇರುತ್ತದೆ ಎಂದಲ್ಲಿ ಆ ದೇವಸ್ಥಾನದಲ್ಲಿ ಜೀವಮಾನ ಪರ್ಯಂತ ಏಕಪ್ರಕಾರವಾಗಿ ಪೂಜೆ ಸಲ್ಲಿಸುತ್ತಿರುವ ಅರ್ಚಕರು ಬಹುಶಃ ಕೋಟ್ಯಧಿಪತಿಗಳಾಗಿ ದೇವಾಲಯಕ್ಕೆ ವಿಲಾಸಿ ಕಾರುಗಳಲ್ಲಿ ಬರಬೇಕಿತ್ತು. ಆದರೆ ಹಾಗಾಗಿಲ್ಲವಲ್ಲ!. ಆದರೆ ಈ ನೀತಿಗೆ ಸಂಪೂರ್ಣ ವಿರುದ್ದ ಎಂಬಂತೆ ಅರ್ಚಕರಾಗಿದ್ದ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಇಂದು ಜಗತ್ತಿನಾದ್ಯಂತ ಅರ್ಚಿಸಲ್ಪಡುತ್ತಿದ್ದಾರೆ. ಕಾರಣ, ಅವರು ತಾವು ಅರ್ಚಿಸುತ್ತಿದ್ದ ಭವತಾರಿಣಿಯ ಮೃಣ್ಮಯ ಮೂರ್ತಿಯಲ್ಲಿ ಚಿನ್ಮಯಿಯನ್ನು ಕಾಣುತ್ತಾ ನಿಜವಾದ ಅರ್ಥದಲ್ಲಿ ಜಗಜ್ಜನನಿಯ ಅರ್ಚಕರಾಗಿದ್ದರು.

ರಾಮಕೃಷ್ಣರಿಗೆ ಜಗನ್ಮಾತೆ, ಭವತಾರಿಣಿ ತನ್ನ ನಿಜ ರೂಪದಲ್ಲಿ ಕಾಣಿಸುತ್ತಾ ಸೇವೆಗಳನ್ನು ಆನಂದದಿಂದ ಸ್ವೀಕರಿಸುತ್ತಿದ್ದ ಸನ್ನಿವೇಶಗಳನ್ನು ಅದ್ಭುತವಾಗಿ ‘ಶ್ರೀ ರಾಮಕೃಷ್ಣ ಲೀಲಾ ಪ್ರಸಂಗ’ ಎಂಬ ಗ್ರಂಥದಲ್ಲಿ ಅರಿಯಬಹುದಾಗಿದೆ. ಇಲ್ಲಿ ನಾವು ಕಾಣುವುದು ಸಾಕಾರ ರೂಪವೇ ಭವತಾರಿಣಿಯಾಗಿ ಪರಮಹಂಸರಿಗೆ ಗೋಚರವಾಗುತ್ತಿದ್ದಳು ಎಂಬುದನ್ನು. ಹಾಗಾದಲ್ಲಿ ನಾವು ಅದೆಷ್ಟು ಬಾರಿ ತೀರ್ಥಕ್ಷೇತ್ರ ದರ್ಶನ ಮಾಡಿ ಬಂದರೂ ಭಗವದ್ದರ್ಶನವಾಗುವುದಿಲ್ಲ ಏಕೆ? ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡಾಗ ನಮ್ಮ ಮನಸ್ಸಿನಲ್ಲಿ ಪ್ರತಿ ಕ್ಷಣ ಮೇಲೇಳುತ್ತಿರುವ ಆಸೆ, ಲಾಲಸೆಗಳ ಪಟ್ಟಿ ಅಪಾರ ಎಂಬುದರ ಅರಿವಾಗುತ್ತದೆ. ‘ಕೇವಲ ನಿನ್ನ ದಿವ್ಯ ದರ್ಶನ ನೀಡು’ ಎಂದು ಕನಕದಾಸರು ಉಡುಪಿಯ ಕೃಷ್ಣನ ಬಳಿ ಪ್ರಾರ್ಥಿಸಿದಂತೆ ಬಾಗಿಲನು ತೆರೆದು, ಸೇವೆಯನು ಕೊಡು ಹರಿಯೇ, ಕೂಗಿದರು ಧ್ವನಿ ಕೇಳಲಿಲ್ಲವೇ? ಎಂದು ಆರ್ತನಾದದಿಂದ ಪ್ರಾರ್ಥಿಸುವವರು ಎಷ್ಟು ಮಂದಿ ಇದ್ದಾರೆ? ವಾಸ್ತವವಾಗಿ ಕನಕರ ವಿಧಾನವೇ ನಿಜವಾದ ಅರ್ಥದಲ್ಲಿ ಭಗವದ್ದರ್ಶನ ಪಡೆಯುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅದೊಂದು ದಿನ ಮಾಸ್ಟರ್ ಮಹೇಂದ್ರನಾಥಗುಪ್ತ ಪರಮಹಂಸರ ದಿವ್ಯ ದರ್ಶನಕ್ಕೆ ಎಂದಿನಂತೆ ಆಗಮಿಸಿ ಸತ್ಸಂಗದಲ್ಲಿ ದಕ್ಷಿಣೇಶ್ವರದ ದಿವ್ಯ ಮಂದಿರದಲ್ಲಿರುವಾಗ ಈ ಪ್ರಶ್ನೆ ಹಾಕುತ್ತಾನೆ. ಸ್ವಾಮಿ ಭಗವಂತನ ದರ್ಶನ ಈ ಕಣ್ಣುಗಳಿಂದ ಸಾಧ್ಯವೇ?. ಆಗ ರಾಮಕೃಷ್ಣರು, ‘ಭಗವಂತನನ್ನು ಈ ಸ್ಥೂಲ ಕಣ್ಣುಗಳಿಂದ ನೋಡಲಾಗುವುದಿಲ್ಲ. ಸಾಧನೆ ಮುಂದುವರಿಸುತ್ತ ಹೋದಂತೆ ಸಾಧಕನಿಗೆ ಭಗವತ್ಪ್ರೇಮದ ಶರೀರ ಉಂಟಾಗುತ್ತದೆ.

ಅದಕ್ಕೆ ಭಗವತ್ ಪ್ರೇಮದ ಕಣ್ಣು, ಕಿವಿ ಇರುತ್ತದೆ. ಆ ಕಣ್ಣುಗಳಿಂದ ಆತ ಭಗವದ್ದರ್ಶನ ಪಡೆಯುತ್ತಾನೆ. ಆ ಕಿವಿಗಳಿಂದ ಭಗವದ್ ವಾಣಿಯನ್ನು ಆಲಿಸುತ್ತಾನೆ’ ಎಂದು ವಿವರಿಸುತ್ತಾರೆ. ನಿಜ! ಈ ದೋಷಯುಕ್ತ, ಭಯಾನಕ ಪ್ರಾಪಂಚಿಕತೆಯಿಂದ ತುಂಬಿ ತುಳುಕುತ್ತಿರುವ ಚಕ್ಷುಗಳಿಂದ ಆ ದಿವ್ಯ, ಸುಂದರ, ಶಾಶ್ವತ, ಅಜರ, ಅಮರವಾದ ಭಗವದ್ ರೂಪವನ್ನು ಕಾಣಲು ಅಸಾಧ್ಯ! ಭಗವದ್ದರ್ಶನಕ್ಕೆ ಆ ಚಕ್ಷುಗಳು ಪರಮ ಪವಿತ್ರವಾಗಿರಬೇಕು. ಉದಾಹರಣೆಗೆ ಭಕ್ತೆ ಮೀರಾ, ಅಕ್ಕಮಹಾದೇವಿ, ದಾಸವರೇಣ್ಯರು, ತುಳಸೀದಾಸರು, ಕಬೀರದಾಸ, ಸೂರದಾಸರಂತಹ ಸಂತ ಮಹಾತ್ಮರಿಗೆ ಈ ದಿವ್ಯ ಚಕ್ಷುವಿತ್ತು. ಆ ಚಕ್ಷುಗಳಲ್ಲಿ ಕಾಮ, ಕಾಂಚನ, ಆಸೆ, ಲಾಲಸೆಗಳ ಸೋಂಕಿನ ಲವಶೇಷವೂ ಇದ್ದಿರಲಿಲ್ಲವಾದ್ದರಿಂದ ಈ ದಿವ್ಯಾತ್ಮರಿಗೆ ಸದಾ ಭಗವದ್ದರ್ಶನ ದೊರೆಯುತ್ತಿತ್ತು. ಈ ವಿಚಾರವನ್ನು ರಾಮಕೃಷ್ಣರು ಹೀಗೆ ತಿಳಿಸುತ್ತಾರೆ: ಭಗವಂತನಲ್ಲಿ ಪ್ರೀತಿ ಬಹಳವಾಗಿ ಉಂಟಾಗುವವರೆಗೆ ಭಗವದ್ದರ್ಶನ ಸಾಧ್ಯವಿಲ್ಲ. ಅಪರಿಮಿತ ಭಗವದ್ ಪ್ರೀತಿ ಉಂಟಾಯಿತು ಎಂದರೆ ಎಲ್ಲವೂ ಭಗವನ್ಮಯವಾಗಿ ಕಾಣುತ್ತದೆ. ಆಗ ಅನುಭವವಾಗುತ್ತದೆ ನಾನೇ ಅವನು ಎಂಬುದಾಗಿ! ಹಗಲೂ, ಇರುಳು ಯಾರು ಭಗವಂತನ ಧ್ಯಾನದಲ್ಲೇ ಇರುತ್ತಾನೋ ಆತ ಆ ಭಗವಂತನನ್ನು ಎಲ್ಲೆಲ್ಲಿಯೂ ಕಾಣುತ್ತಾನೆ. ಇದು ಹೇಗೆಂದರೆ ಸ್ವಲ್ಪ ಹೊತ್ತು ತದೇಕ ದೃಷ್ಟಿಯಿಂದ ದೀಪದ ಕುಡಿಯನ್ನೇ ದಿಟ್ಟಿಸಿ ನೋಡುತ್ತಿದ್ದ ಬಳಿಕ ಯಾವ ಕಡೆ ತಿರುಗಿ ನೋಡಿದರೂ ಎಲೆಲ್ಲೂ ದೀಪದ ಕುಡಿಯೇ ಕಾಣುವ ಹಾಗೆ.

ಈ ಸಂದರ್ಭದಲ್ಲಿ ಅಂದಿನ ಕಾಲದ ಮಹಾನ್ ಪಂಡಿತನಾಗಿದ್ದ ಶಿವನಾಥ ಶಾಸ್ತ್ರಿ ಪರಮಹಂಸರಿಗೆ ಈ ಪ್ರಶ್ನೆ ಹಾಕುತ್ತಾನೆ: ಸ್ವಾಮಿ, ಬಹುವಾಗಿ ಭಗವಂತನ ಧ್ಯಾನ ಮಾಡಿದರೆ ಮತಿ ಭ್ರಮಣೆಯಾಗುವುದಿಲ್ಲವೇ? ಅದಕ್ಕೆ ರಾಮಕೃಷ್ಣರ ಉತ್ತರ ಹೀಗಿತ್ತು: ಚೈತನ್ಯನ ಧ್ಯಾನ ಮಾಡಿ ಮನುಷ್ಯ ಅಚೈತನ್ಯನಾಗುವುದಿಲ್ಲ! ಸದಾ ನಿತ್ಯ ಚೈತನ್ಯ ವಸ್ತುವಿನ ಮೇಲೆ ಧ್ಯಾನಿಸಿದರೆ ಅಚೈತನ್ಯನೂ ಚೈತನ್ಯನಾಗುವುದರಲ್ಲಿ ಸಂದೇಹವಿಲ್ಲ. ಭಗವದ್ ಕೃಪೆ ದೊರೆಯಿತು ಎಂದಲ್ಲಿ ಯಾವ ರೀತಿಯ ಭಯವೂ ಇರುವುದಿಲ್ಲ. ಇದೇ ನಿಜವಾದ ಅರ್ಥದಲ್ಲಿ ಭಗವದ್ದರ್ಶನ ಪಡೆಯುವುದು ಎಂದರ್ಥ.