ಅಟಲ್ಜೀ ನನ್ನ ಮೇಲೆ ಇರಿಸಿದ್ದ ಪ್ರೀತಿ, ವಿಶ್ವಾಸಗಳಲ್ಲಿ ನಾನು ಮಾತೃವಾತ್ಸಲ್ಯ ಅನುಭವಿಸಿದ್ದೇನೆ. ನನಗೆ ಹಿನ್ನಡೆ ಎದುರಾದಾಗಲೆಲ್ಲ ಮತ್ತೆ ಪುಟಿದೇಳುವ ಸ್ಪೂರ್ತಿ, ಹೋರಾಟದ ಕಿಚ್ಚು ಹಾಗೂ ತಾಳ್ಮೆಯ ನಡೆ ಮೂಡಲು ಅವರೇ ಸದಾ ಮಾದರಿ.
ಹೋರಾಟಕ್ಕೆ ಪ್ರೇರಣೆ: 2007 ಹಾಗೂ 2018ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆರಳೆಣಿಕೆ ದಿನಗಳಲ್ಲಿ ರಾಜೀನಾಮೆ ನೀಡಬೇಕಾದ ಪ್ರಸಂಗ ಬಂದಾಗ, ಅಟಲ್ಜೀ ಕೇವಲ 13 ದಿನಗಳ ಪ್ರಧಾನಿಯಾಗಿ 1996ರ ಮೇ 28ರಂದು ರಾಜೀನಾಮೆ ನೀಡುವ ಸಂದರ್ಭದಲ್ಲಿ ಮಾಡಿದ ‘ಐತಿಹಾಸಿಕ ಭಾಷಣ’ ನನ್ನಲ್ಲಿ ಆತ್ಮವಿಶ್ವಾಸದ ಹೋರಾಟಕ್ಕೆ ಛಲ ಮೂಡಿಸಿತು. 2007ರ ನವೆಂಬರ್ 19 ಮತ್ತು 2018ರ ಮೇ 19ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಂದರ್ಭಗಳಲ್ಲಿ ನನ್ನಲ್ಲಿ ಪಕ್ಷವನ್ನು ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಹಾಗೂ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನ ತಂದುಕೊಡುವ ಶಪಥ ಕೈಗೊಳ್ಳಲು ಅಟಲ್ಜೀ ಮಾತುಗಳು ಆತ್ಮಬಲದ ಚೈತನ್ಯವಾಗಿದ್ದವು.
ನೂರರಿಂದ ಲಕ್ಷ: ಪಕ್ಷ ಸಂಘಟನೆಯ ಆರಂಭದಲ್ಲಿ ನೂರಿನ್ನೂರು ಜನರನ್ನು ಸೇರಿಸುವುದೂ ಕಷ್ಟವಾಗುತ್ತಿತ್ತು. ಸ್ವತಃ ವಾಜಪೇಯಿ ಬಂದರೂ 2-3 ಸಾವಿರ ಜನ ಭಾಷಣ ಕೇಳಲು ಬರುತ್ತಿದ್ದರು. ಈ ಬಗ್ಗೆ ಅಟಲ್ಜೀ ಎಂದೂ ಬೇಸರಗೊಳ್ಳಲಿಲ್ಲ; ಬದಲಾಗಿ ನಮ್ಮಲ್ಲಿ ಇನ್ನಷ್ಟು ಉತ್ಸಾಹ ತುಂಬುತ್ತಿದ್ದರು. ಮುಂದೊಮ್ಮೆ, ಹುಬ್ಬಳ್ಳಿಯಲ್ಲಿ ಜೆ.ಎಚ್.ಪಟೇಲರ ನೇತೃತ್ವದ ಜನತಾದಳ ಸರ್ಕಾರದ ವಿರುದ್ಧದ ಜನಾಂದೋಲನದಲ್ಲಿ ಸಮಾವೇಶಗೊಂಡ 2 ಲಕ್ಷಕ್ಕೂ ಅಧಿಕ ಸಂಖ್ಯೆಯ ಜನಸಮೂಹವನ್ನು ಕಂಡು ನಿಬ್ಬೆರಗಾಗಿ, ‘ಕರ್ನಾಟಕದ ಭವಿಷ್ಯ ಬೆಳಗಲು ಬಿಜೆಪಿಗೆ ಈ ಜನಪರ ಹೋರಾಟದ ಸಮಾವೇಶ ಮುನ್ನುಡಿ ಬರೆದಿದೆ’ ಎಂದು ಅಟಲ್ಜೀ ಹೇಳಿದ ಮಾತು ಇಂದಿಗೂ ನನ್ನ ಮನದಲ್ಲಿ ಮಾರ್ದನಿಸುತ್ತಿದೆ. ಸಮಾವೇಶದ ನಂತರ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ನನ್ನನ್ನು ತಬ್ಬಿಕೊಂಡು ಅಟಲ್ಜೀ ಆನಂದಬಾಷ್ಪ ಸುರಿಸಿದ್ದರು. ಕಾರ್ಯಕರ್ತರ ಬಗ್ಗೆ ಅವರಿಗಿದ್ದ ಕಾಳಜಿಗೆ ಸಾಕ್ಷಿಯಾಗಿ ಘಟನೆಯೊಂದು ನನ್ನ ನೆನಪಿನಲ್ಲಿ ಮಾಸದೇ ಉಳಿದಿದೆ.
1984ರಲ್ಲಿ ಇಂದಿರಾ ಗಾಂಧಿಯವರ ಸಾವಿನ ಅನುಕಂಪದ ಅಲೆಯ ಕಾರಣಕ್ಕಾಗಿ ಚುನಾವಣೆಯಲ್ಲಿ ಸೋಲು ಕಂಡ ಅಟಲ್ಜೀಯವರ ಪರಾಜಯದ ಸಂಕಟ ಅನುಭವಿಸಲಾರದೆ ಭದ್ರಾವತಿಯ ಅಭಿಮಾನಿ ಕಾರ್ಯಕರ್ತ ಲಕ್ಷ್ಮಿ ನಾರಾಯಣ, ‘ವಾಜಪೇಯಿಯವರಂತಹ ಮೇರುವ್ಯಕ್ತಿಯನ್ನು ಸೋಲಿಸಿದ ಜನರಿರುವ ದೇಶದಲ್ಲಿ ನಾನು ಬದುಕಲಾರೆ’ ಎಂದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಭದ್ರಾವತಿಗೆ ಸ್ವತಃ ಆಗಮಿಸಿ ಲಕ್ಷ್ಮಿನಾರಾಯಣನ ಕುಟುಂಬಕ್ಕೆ ಸಾಂತ್ವನ ಹೇಳಿ ಅವನ ತಂಗಿ-ತಮ್ಮನ ಓದಿನ ಜವಾಬ್ದಾರಿ ಅಟಲ್ಜೀ ವಹಿಸಿಕೊಂಡಿದ್ದರು.
ಅಟಲ್ಜಿ ಎಂದೂ ಆಡಂಬರ, ಅದ್ದೂರಿತನ ಹತ್ತಿರ ಸುಳಿಯಗೊಡಲಿಲ್ಲ. ಐಷಾರಾಮಿ ವಾಸ್ತವ್ಯ, ಪ್ರಯಾಣಗಳನ್ನು ನಿರೀಕ್ಷಿಸಿದವರಲ್ಲ. ಅಂದು ನನ್ನ ಬಳಿ ಇದ್ದ ‘ಸಿಕೆಆರ್-45 ಅಂಬಾಸಿಡರ್ ಕಾರ್’ ನಮ್ಮ ಪಕ್ಷದ ಏಕೈಕ ವಾಹನವಾಗಿತ್ತು. ಇದರಲ್ಲೇ ಅಟಲ್ಜೀ ರಾಜ್ಯಾದ್ಯಂತ ಪ್ರಯಾಣಿಸುತ್ತಿದ್ದರು. ಸರಳ ವಾಸ್ತವ್ಯ ಅಯ್ದುಕೊಳ್ಳುತ್ತಿದ್ದರು. ದೂರದ ಪ್ರಯಾಣಕ್ಕೆ ರೈಲು. ಅವರು ರಾತ್ರಿ 11, 12 ಗಂಟೆವರೆಗೂ ರೈಲ್ವೆ ನಿಲ್ದಾಣದಲ್ಲಿ ಕಾಯ್ದು ರೈಲು ಹತ್ತುತ್ತಿದ್ದರು. ಅಷ್ಟೊತ್ತಿನಲ್ಲೂ ಬಳಲಿಕೆಯ ಕುರುಹು ಬಿಟ್ಟುಕೊಡದೆ ಕಾರ್ಯಕರ್ತರೊಡನೆ ಬೆರೆತು ‘ಆನಂದದ ಆಯಾಸ’ ಅನುಭವಿಸುತ್ತಿದ್ದರು. ಇಂದಿಗೂ ಆಯಾಸ ನನ್ನನ್ನು ರ್ಸ³ಸಬಂದರೆ ಅಟಲ್ಜೀ ಎಂಬ ಚೈತನ್ಯದ ನೆನಪು ಅದನ್ನು ಬಡಿದೋಡಿಸುತ್ತದೆ.
ಅಟಲ್ಜೀ ನನ್ನಲ್ಲಿ ಅದೆಷ್ಟು ಮಾತೃ ಮಮಕಾರವಿರಿಸಿಕೊಂಡಿದ್ದರೆಂದರೆ ದೆಹಲಿಗೆ ಹೋದಾಗ ಶಿಷ್ಟಾಚಾರದ ಮಾರ್ಗವಿಲ್ಲದೆ, ನೇರ ಭೇಟಿಗೆ ಅವಕಾಶ ಕಲ್ಪಿಸಿದ್ದರು. ಯಡಿಯೂರಪ್ಪ ಬಂದರೆ ‘ಪಕ್ಷ ಹಾಗೂ ಜನರ ವಿಷಯಗಳನ್ನಷ್ಟೇ ಹೊತ್ತು ತರುತ್ತಾನೆ’ ಎಂಬ ಅದಮ್ಯ ವಿಶ್ವಾಸ ಅವರದ್ದಾಗಿತ್ತು. ಶಿಕಾರಿಪುರದ ನಮ್ಮ ಮನೆಗೆ ಭೇಟಿ ನೀಡಿದ್ದರು. ಅದು ನಮ್ಮ ಕುಟುಂಬಕ್ಕೆ ಎಂದಿಗೂ ಮರೆಯದ ಸವಿಕ್ಷಣಗಳ ಬುತ್ತಿ. 1999ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ನಾನು ಸೋತಾಗ, ‘ನೀನು ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ; ಕೇಂದ್ರ ಸಂಪುಟ ಸೇರಲು ಬಾ’ ಎಂದು ಅಟಲ್ಜೀ ನೀಡಿದ ಆಹ್ವಾನವನ್ನು ನಾನೆಂದೂ ಮರೆಯಲಾರೆ. ಅಂದು ಅವರ ಆಹ್ವಾನವನ್ನು ವಿನಯದಿಂದ ನಿರಾಕರಿಸಿ, ‘ನನಗೆ ಮಂತ್ರಿ ಪದವಿ ಬೇಡ. ರಾಜ್ಯದಲ್ಲಿ ಪಕ್ಷ ಕಟ್ಟಿ ಅಧಿಕಾರಕ್ಕೆ ತರಲು ಅವಕಾಶ ಮಾಡಿಕೊಡಿ’ ಎಂದು ವಿನಂತಿಸಿದೆ. ಮಂತ್ರಿ ಪದವಿಗೆ ಬದಲಾಗಿ, ರಾಜಶೇಖರಮೂರ್ತಿಯವರಿಗೆ ಕೊಟ್ಟ ವಚನದಂತೆ ಅವರನ್ನು ರಾಜ್ಯಸಭೆಗೆ ಕಳುಹಿಸುವಲ್ಲಿ ಸಫಲನಾದೆ.
ಆತ್ಮವಿಶ್ವಾಸದ ಮಾತು: 2004ರಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಅಟಲ್ಜೀ ಸ್ವಲ್ಪವೂ ಅಸಹನೆ, ಹತಾಶೆ ತೋರ್ಪಡಿಸಿಕೊಳ್ಳದೆ, ‘ನಾವು ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯಕ್ರಮವನ್ನು ಜನರ ಬಳಿ ಕೊಂಡೊಯ್ಯುವಲ್ಲಿ ವಿಫಲರಾಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ನಾವು ಎದೆಗುಂದದೆ ಪಕ್ಷ ಕಟ್ಟೋಣ’ ಎಂಬ ಅತ್ಮವಿಶ್ವಾಸದ ಮಾತನಾಡಿದ್ದು ಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲೇಬೇಕೆಂದು ನಾನು ಸಂಕಲ್ಪ ತೊಡಲು ಕಾರಣವಾಯಿತು.
ಬಿಜೆಪಿ-ಅಟಲ್ಜೀ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ದೇಶದ ಜನತೆ ಅವರನ್ನು ಭಾರತದ ಹೆಮ್ಮೆಯ ಸುಪುತ್ರನೆಂಬ ಅಭಿಮಾನದಿಂದ ನೆನೆಯುತ್ತಾರೆ. ಪ್ರತಿಯೊಂದು ಪಕ್ಷವೂ ಅವರೊಬ್ಬ ರಾಜಕೀಯ ಯೋಗಿ ಎಂದು ಪರಿಗಣಿಸಿ ಅಜಾತಶತ್ರುವಿನ ಸ್ಥಾನ ನೀಡಿವೆ. ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳು ಅವರನ್ನು ‘ಅಚಲ ವಿಶ್ವಾಸದ ಸಂಕೇತ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಯಭಾರಿ’ ಎಂದು ಬಣ್ಣಿಸಿವೆ. ‘ಅಟಲ್ಜೀ ಮತ್ತೊಮ್ಮೆ ಹುಟ್ಟಿ ಬನ್ನಿ, ಭಾರತಾಂಬೆಯ ಬೆಳಗ ಬನ್ನಿ.’