ನವದೆಹಲಿ: ಕರೊನಾಕ್ಕೆ ಯಶಸ್ವಿಯಾಗಿ ಔಷಧವನ್ನು ತಯಾರಿಸಿದ್ದು, ಅದನ್ನು ಕರೊನಿಲ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಯೋಗ ಗುರು ಬಾಬಾ ರಾಮದೇವ್ ಅವರ ಕಂಪನಿ ಹೇಳಿಕೊಂಡಿತ್ತು. ಆದರೆ, ಈ ಔಷಧವನ್ನು ಕ್ಲಿನಿಕಲ್ ಟ್ರಯಲ್ಗೆ ಒಳಪಡಿಸಿಲ್ಲ, ಜತೆಗೆ ಇದನ್ನು ತಯಾರಿಸಿ, ಮಾರಾಟ ಮಾಡಲು ಸೂಕ್ತ ಅನುಮತಿಗಳನ್ನೂ ಪಡೆದುಕೊಂಡಿಲ್ಲ ಎಂದು ಹೇಳಿದ್ದ ಸರ್ಕಾರ, ಇದರ ಮಾರಾಟವನ್ನು ನಿಷೇಧಿಸಿತ್ತು. ಇದೀಗ ಇದರ ಕರೊನಿಲ್ ಎಂಬ ಬ್ರ್ಯಾಂಡ್ನೇಮ್ ಬಳಕೆಯನ್ನು ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ತಮಿಳುನಾಡಿನ ಚೆನ್ನೈ ಮೂಲದ ರಾಸಾಯನಿಕಗಳ ತಯಾರಿಕಾ ಸಂಸ್ಥೆ ಆರೂಢ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು ಕರೊನಿಲ್ ಎಂಬ ಬ್ರ್ಯಾಂಡ್ನೇಮ್ ಅನ್ನು 1993ರಲ್ಲೇ ನೋಂದಾಯಿಸಿದೆ. ಈ ಹೆಸರಿನಲ್ಲಿ ರಾಸಾಯನಿಕ ಹಾಗೂ ಬೃಹತ್ ಯಂತ್ರೋಪಕರಣಗಳನ್ನು ಸ್ವಚ್ಛಗೊಳಿಸುವ ಸ್ಯಾನಿಟೈಸರ್ಗಳನ್ನು ಉತ್ಪಾದಿಸುತ್ತಿದೆ. ಕರೊನಿಲ್ 213 ಎಸ್ಪಿಎಲ್ ಮತ್ತು ಕರೊನಿಲ್ 92ಬಿ ಎಂಬ ಹೆಸರಿನಲ್ಲಿ ಈ ಉತ್ಪನ್ನಗಳನ್ನು ಉತ್ಪಾದಿಸಿ, ಮಾರಾಟ ಮಾಡುತ್ತಿದ್ದು, ಕಾಲಾನುಕಾಲಕ್ಕೆ ಟ್ರೇಡ್ಮಾರ್ಕ್ ಬಳಕೆಯ ಅನುಮತಿಯನ್ನು ನವೀಕರಿಸಿಕೊಂಡು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಆರೂಢ ಕಂಪನಿಯು ಕರೊನಿಲ್ ಬ್ರ್ಯಾಂಡ್ನೇಮ್ ಅನ್ನು ಬಳಸದಂತೆ ಪತಂಜಲಿ ಸಂಸ್ಥೆಯನ್ನು ತಡೆಯಬೇಕು ಎಂದು ಕೋರಿ ಮದ್ರಾಸ್ ಹೈಕೋರ್ಟ್ನಲ್ಲಿ ಮನವಿ ಮಾಡಿಕೊಂಡಿತ್ತು. ನಾವು ಮತ್ತು ಪತಂಜಲಿ ಈ ಬ್ರ್ಯಾಂಡ್ನೇಮ್ನಲ್ಲಿ ಉತ್ಪಾದಿಸುವ ಉತ್ಪನ್ನಗಳು ಬೇರೆ ಬೇರೆ ಇರಬಹುದು. ಆದರೆ, ಒಂದೇ ಬಗೆಯ ಟ್ರೇಡ್ಮಾರ್ಕ್ಗಳ ಬಳಕೆಯಿಂದ ನಮ್ಮ ಬೌದ್ಧಿಕ ಆಸ್ತಿಯ ಹಕ್ಕಿಗೆ ಧಕ್ಕೆ ಉಂಟಾಗುತ್ತದೆ ಎಂದು ಆರೂಢ ಕಂಪನಿ ವಾದಿಸಿತ್ತು.
ಇದರ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಸಿ.ವಿ. ಕಾರ್ತಿಕೇಯನ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕರೊನಿಲ್ ಬ್ರ್ಯಾಂಡ್ನೇಮ್ ಅನ್ನು ಬಳಸದಂತೆ ಪತಂಜಲಿ ಸಂಸ್ಥೆಗೆ ಸೂಚಿಸಿ ಜು.30ರವರೆಗೆ ಅನ್ವಯಿಸುವಂತೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.